ಮಂಗಳೂರು: ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಸಂತ್ರಸ್ತರ ಜೀವ ಉಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪಿಎಂ ರಾಹತ್’ (PM Rahat) ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ರಾಜ್ಯಕ್ಕೇ ಮಾದರಿಯಾಗುವಂತೆ ರೂಪಿಸಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಕರೆ ನೀಡಿದ್ದಾರೆ.
ಈ ಸಂಬಂಧ ಶಾಸಕ ವೇದವ್ಯಾಸ ಕಾಮತ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್. ತಿಮ್ಮಯ್ಯ, ಡಿಸಿಪಿ ರವಿಶಂಕರ್, ಜಿಲ್ಲೆಯ ಪ್ರಮುಖ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಮನ್ವಯ ಸಭೆ ನಡೆಸಿದ ಸಂಸದರು, ಯೋಜನೆಯ ಪ್ರಗತಿ ಮತ್ತು ಅನುಷ್ಠಾನದ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಮಾತನಾಡಿದ ಕ್ಯಾ. ಬ್ರಿಜೇಶ್ ಚೌಟ ಅವರು, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವುದರಿಂದ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ‘ಪಿಎಂ ರಾಹತ್’ ಯೋಜನೆ ಅತ್ಯಂತ ಮಹತ್ವದ್ದಾಗಿದೆ ಎಂದರು.
ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಆಸ್ಪತ್ರೆ ಅಪಘಾತ ಸಂತ್ರಸ್ತರನ್ನು ದಾಖಲಿಸಲು ನಿರಾಕರಿಸಿದರೆ ಅಥವಾ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತೋರಿಸಿದರೆ, ಅಂತಹ ಆಸ್ಪತ್ರೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸ್ಪಷ್ಟ ನಿರ್ದೇಶನ ನೀಡಿದರು.
ಯೋಜನೆಯ ಪ್ರಮುಖ ಸೌಲಭ್ಯಗಳು
‘ಪಿಎಂ ರಾಹತ್’ ಯೋಜನೆಯಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಯಾವುದೇ ದಾಖಲೆಗಳ ತೊಡಕಿಲ್ಲದೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಏಳು ದಿನಗಳವರೆಗೆ ಗರಿಷ್ಠ ₹1.50 ಲಕ್ಷದವರೆಗೆ ನಗದು ರಹಿತ ತುರ್ತು ಚಿಕಿತ್ಸೆ ಪಡೆಯುವ ಅವಕಾಶವಿದೆ.
ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲು ಸಾರ್ವಜನಿಕರಲ್ಲಿ ಯಾವುದೇ ರೀತಿಯ ಪೊಲೀಸ್ ಅಥವಾ ಕಾನೂನು ಭಯ ಇರಬಾರದು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರವು 2025ರಲ್ಲೇ ಯೋಜನೆ ಆರಂಭಿಸಿದ್ದರೂ, ರಾಜ್ಯದಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಅನುಷ್ಠಾನ ಆರಂಭಗೊಂಡಿದೆ. ಆದ್ದರಿಂದ ಇನ್ನು ಮುಂದೆ ಜಿಲ್ಲೆಯಲ್ಲಿ ಯೋಜನೆಯನ್ನು ಕಟ್ಟುನಿಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸಂಸದರು ಹೇಳಿದರು.
ಇದನ್ನೂ ಓದಿ: ಎಲೆ ಚುಕ್ಕಿ ಸೇರಿದಂತೆ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ ಸಂಸದ ಕ್ಯಾ.ಬ್ರಿಜೇಶ್ ಚೌಟ
e-DAR ಮಾಹಿತಿ ನಮೂದು ಕಡ್ಡಾಯ
ಯೋಜನೆಯಡಿ ಚಿಕಿತ್ಸಾ ವೆಚ್ಚದ ಮರುಪಾವತಿ ವಿಳಂಬವಾಗದಂತೆ ಆಸ್ಪತ್ರೆಗಳು e-DAR ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸುವುದು ಕಡ್ಡಾಯವಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ 24 ಗಂಟೆಗಳೊಳಗೆ, ತುರ್ತು ಅಥವಾ ವಿಷಮ ಪರಿಸ್ಥಿತಿಯಲ್ಲಿದ್ದರೆ ಗರಿಷ್ಠ 48 ಗಂಟೆಗಳೊಳಗೆ e-DAR ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಬೇಕು.
ಆಸ್ಪತ್ರೆ ದಾಖಲಿಸಿದ ಮಾಹಿತಿಯನ್ನು ಪೊಲೀಸ್ ಇಲಾಖೆ ಪರಿಶೀಲಿಸಿ ಅನುಮೋದಿಸಿದ ಬಳಿಕ ಅದು TMS ಪೋರ್ಟಲ್‌ಗೆ ರವಾನೆಯಾಗುತ್ತದೆ. ನಂತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ನಿಗದಿತ ಅವಧಿಯಲ್ಲಿ ಮಾಹಿತಿ ದಾಖಲಿಸದಿದ್ದರೆ ಅರ್ಹ ಸಂತ್ರಸ್ತರು ಉಚಿತ ಚಿಕಿತ್ಸೆಯ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇರುವುದರಿಂದ, ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಂಸದರು ಸೂಚಿಸಿದರು.
ತಾಲೂಕು ಮಟ್ಟದಲ್ಲೂ ಸಭೆ, ಮಾಸಿಕ ಪರಿಶೀಲನೆಗೆ ಸೂಚನೆ
ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಪ್ರತಿ ತಾಲೂಕಿನ ಪ್ರಮುಖ ಆಸ್ಪತ್ರೆಗಳೊಂದಿಗೆ ತಾಲೂಕು ಮಟ್ಟದಲ್ಲಿಯೂ ಸಭೆಗಳನ್ನು ನಡೆಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಅವರು ನಿರ್ದೇಶನ ನೀಡಿದರು.
ಇದರೊಂದಿಗೆ, ಯೋಜನೆಯಡಿ ಚಿಕಿತ್ಸೆ ಪಡೆದ ಸಂತ್ರಸ್ತರ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸಬೇಕು, ಪ್ರತಿ ತಿಂಗಳು ಪ್ರಗತಿ ಪರಿಶೀಲನೆಗಾಗಿ ಮಾಸಿಕ ವಿಮರ್ಶಾ ಸಭೆ ನಡೆಸಬೇಕು ಹಾಗೂ ಆಸ್ಪತ್ರೆಗಳ ಮೂಲಕ ಸಾರ್ವಜನಿಕರಲ್ಲಿ ಯೋಜನೆ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆಸ್ಪತ್ರೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಯೋಜನೆಯ ಲಾಭ ಪ್ರತಿಯೊಬ್ಬ ಅರ್ಹ ಸಂತ್ರಸ್ತನಿಗೂ ತಲುಪಲು ಸಾಧ್ಯವಾಗುತ್ತದೆ ಎಂದು ಸಂಸದರು ಅಭಿಪ್ರಾಯಪಟ್ಟರು.
ಸಾರ್ವಜನಿಕರೂ ನೆರವಿಗೆ ಮುಂದೆ ಬರಬೇಕು: ವೇದವ್ಯಾಸ ಕಾಮತ್
ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, “ಅಪಘಾತ ಸಂಭವಿಸಿದ ಮೊದಲ ಕ್ಷಣಗಳಲ್ಲಿ ಗಾಯಾಳುವಿನ ಜೀವ ಉಳಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರ ಯಶಸ್ಸಿನಲ್ಲಿ ಆಸ್ಪತ್ರೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಯಾವುದೇ ಅಪಘಾತ ಸಂತ್ರಸ್ತರು ಉಚಿತ ಚಿಕಿತ್ಸಾ ಸೌಲಭ್ಯದಿಂದ ವಂಚಿತರಾಗದಂತೆ ಆಸ್ಪತ್ರೆಗಳು ಎಚ್ಚರವಹಿಸಬೇಕು. ಜೊತೆಗೆ ಸಾರ್ವಜನಿಕರು ಕೂಡ ಪೊಲೀಸ್ ಅಥವಾ ಕಾನೂನು ಭಯವಿಲ್ಲದೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಮುಕ್ತವಾಗಿ ಮುಂದೆ ಬರಬೇಕು” ಎಂದು ಕರೆ ನೀಡಿದರು.

