‘ರಾಮಾಯಣ’ ಆಫಿಷಿಯಲ್ ಟ್ರೇಲರ್ ಔಟ್: ಶ್ರೀರಾಮನಾಗಿ ರಣಬೀರ್‌ ಕಪೂರ್‌, ರಾವಣನಾಗಿ ಯಶ್‌ ಅಬ್ಬರ

ಮುಂಬೈ: ದೇಶಾದ್ಯಂತ ಅಪಾರ ಕುತೂಹಲ ಮೂಡಿಸಿರುವ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಅಧಿಕೃತ ಟ್ರೇಲರ್ ಶುಭ ಬ್ರಹ್ಮ ಮುಹೂರ್ತದ ವೇಳೆಯಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿದೆ.

ರಾಮಾಯಣ ಮಹಾಕಾವ್ಯದ ಈ ದೃಶ್ಯಕಾವ್ಯದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನಾಗಿ ಗಂಭೀರ ಹಾಗೂ ತೇಜಸ್ವಿ ರೂಪದಲ್ಲಿ ಕಾಣಿಸಿಕೊಂಡಿದ್ದರೆ, ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಿದ್ದಾರೆ. ನಟಿ ಸಾಯಿ ಪಲ್ಲವಿ ಸೀತೆಯಾಗಿ ಪ್ರಪ್ರಥಮ ಬಾರಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಅಯೋಧ್ಯೆಯ ರಾಜ ದಶರಥನಾಗಿ ಅರುಣ್ ಗೋವಿಲ್ (ಹಳೆಯ ರಾಮಾಯಣ ಧಾರಾವಾಹಿಯ ರಾಮ), ಲಕ್ಷ್ಮಣನಾಗಿ ರವಿ ದುಬೆ ಹಾಗೂ ಕೈಕೇಯಿಯಾಗಿ ಲಾರಾ ದತ್ತ ಕಾಣಿಸಿಕೊಂಡಿದ್ದಾರೆ. 14 ವರ್ಷಗಳ ವನವಾಸಕ್ಕೆ ರಾಮ ತೆರಳುವಾಗ, ಸೀತೆ (ಸಾಯಿ ಪಲ್ಲವಿ) ಆತನ ಜೊತೆ ತೆರಳುವ ಸನ್ನಿವೇಶಗಳು ಮನಮುಟ್ಟುವಂತಿವೆ.ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಸಿಜಿಐ ಕೊರತೆಯಿಂದ ಟೀಕೆಗೆ ಒಳಗಾಗಿತ್ತು. ಆದರೆ ಪ್ರಸ್ತುತ ಟ್ರೇಲರ್‌ನಲ್ಲಿ ಅಯೋಧ್ಯೆ ಮತ್ತು ಲಂಕೆಯ ವೈಭವವನ್ನು ಅತ್ಯಂತ ನೈಜವಾಗಿ, ಶ್ರೀಮಂತವಾಗಿ ಚಿತ್ರಿಸಲಾಗಿದೆ. ದೈತ್ಯ ರಾಕ್ಷಸರಿಗಿಂತ ನಾಟಕೀಯತೆ ಹಾಗೂ ಪ್ರಭಾವಶಾಲಿ ಸಂಭಾಷಣೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಟ್ರೇಲರ್‌ನಲ್ಲಿ ಭಗವಾನ್ ಹನುಮಂತನ ಯಾವುದೇ ದೃಶ್ಯ ಅಥವಾ ಸುಳಿವು ನೀಡಲಾಗಿಲ್ಲ. ಈ ಪಾತ್ರವನ್ನು ಎರಡನೇ ಭಾಗಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ಊಹಿಸಲಾಗಿದೆ. ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತರಾದ ಎ.ಆರ್. ರಹಮಾನ್ ಮತ್ತು ಹ್ಯಾನ್ಸ್ ಝಿಮ್ಮರ್ (Hans Zimmer) ಮೊದಲ ಬಾರಿಗೆ ಜೊತೆಯಾಗಿ ಸಂಗೀತ ಸಂಯೋಜಿಸುತ್ತಿದ್ದಾರೆ. ‘DNEG’ ಸಂಸ್ಥೆಯು ದೃಶ್ಯ ವೈಭವದ (VFX) ಜವಾಬ್ದಾರಿ ಹೊತ್ತಿದೆ.

ಇದನ್ನೂ ಓದಿ: ನಟಿ ಸುಮನ್ ರಂಗನಾಥ್ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು: ‘ತದ್ವಿರುದ್ಧ’ ಚಿತ್ರತಂಡದಿಂದ ಗಂಭೀರ ಆರೋಪ

ಮತ್ತೊಂದೆಡೆ, ಪ್ರಸಿದ್ಧ ಸಂಗೀತ ಸಂಸ್ಥೆ ಟಿ-ಸಿರೀಸ್ (T-Series), ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್‌ನಿಂದ ಈ ಚಿತ್ರದ ಎರಡು ಭಾಗಗಳ ಆಡಿಯೋ ಹಕ್ಕುಗಳನ್ನು ಬಾರಿಯ ₹75 ಕೋಟಿ ರೂಪಾಯಿಗೆ ಖರೀದಿಸಿ ಹೊಸ ದಾಖಲೆ ಬರೆದಿದೆ. ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಜೊತೆಗಿನ ಸಹಭಾಗಿತ್ವದಲ್ಲಿ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ತೆರೆಕಾಣುತ್ತಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ವೆಚ್ಚದಾಯಕ ಹಾಗೂ ಅದ್ದೂರಿ ಚಿತ್ರವಾಗಿ ಹೊರಹೊಮ್ಮುತ್ತಿದೆ. ಇನ್ನು ಈ ಸಿನಿಮಾ ದೀಪವಾಳಿಯಂದು ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *