ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ 2026: ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ-ಬೆಳ್ಳಿ ಪದಕ

ಗ್ಲ್ಯಾಸ್ಗೋ (ಸ್ಕಾಟ್‌ಲ್ಯಾಂಡ್): ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತೀಯ ಅಥ್ಲೀಟ್‌ಗಳು ತಮ್ಮ ಭರ್ಜರಿ ಪ್ರದರ್ಶನವನ್ನು ಮುಂದುವರಿಸಿದ್ದು, ಪ್ಯಾರಾ ಅಥ್ಲೆಟಿಕ್ಸ್ ಮತ್ತು ಲಾಂಗ್ ಜಂಪ್‌ನಲ್ಲಿ ಐತಿಹಾಸಿಕ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಪ್ಯಾರಾ ಅಥ್ಲೆಟಿಕ್ಸ್‌ನ ಪುರುಷರ T47 100 ಮೀಟರ್ ರೇಸ್‌ನಲ್ಲಿ ದಿಲೀಪ್ ಗವಿತ್ ಚಿನ್ನದ ಪದಕ ಹಾಗೂ ಮೊಹಮ್ಮದ್ ಬಾಸಿಲ್ ಸಾಲಿಹ್ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇನ್ನೊಂದೆಡೆ, ಲಾಂಗ್ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಪದಕ ಪಡೆದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಬಾಕ್ಸಿಂಗ್‌ನಲ್ಲಿ ಬರೋಬ್ಬರಿ 6 ಮುಷ್ಟಿಯೋಧರು ಸೆಮಿಫೈನಲ್‌ಗೆ ಲಗ್ಗೆ ಇಡುವ ಮೂಲಕ ಭಾರತಕ್ಕೆ 10 ಪದಕಗಳನ್ನು ಖಾತ್ರಿಪಡಿಸಿದ್ದಾರೆ.

ಪುರುಷರ T47 100 ಮೀಟರ್ ರೇಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಮೊದಲ ಎರಡು ಸ್ಥಾನಗಳನ್ನು ತಮ್ಮದಾಗಿಸಿಕೊಂಡು ಇತಿಹಾಸ ಬರೆದರು. ದಿಲೀಪ್ ಗವಿತ್ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ‘ಗೇಮ್ಸ್ ರೆಕಾರ್ಡ್’ (Games Record) ಹಾಗೂ ಈ ಋತುವಿನ ಅತ್ಯುತ್ತಮ ಪ್ರದರ್ಶನದೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಮೊಹಮ್ಮದ್ ಬಾಸಿಲ್ 10.83 ಸೆಕೆಂಡುಗಳಲ್ಲಿ ರೇಸ್ ಪೂರ್ಣಗೊಳಿಸಿ ಬೆಳ್ಳಿ ಪದಕ ಪಡೆದರು.

ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ರಾಜ ಮುತ್ತುಪಾಂಡಿಗೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ

ಯಾರು ಈ ದಿಲೀಪ್ ಗವಿತ್?

ಮಹಾರಾಷ್ಟ್ರದ ನಾಸಿಕ್ ಸಮೀಪದ ಸಣ್ಣ ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿದ ದಿಲೀಪ್ ಗವಿತ್, ತಮ್ಮ 5-6ನೇ ವಯಸ್ಸಿನಲ್ಲಿ ಮರದಿಂದ ಬಿದ್ದು ತೀವ್ರ ಗಾಯಗೊಂಡಿದ್ದರು. ಸಕಾಲದಲ್ಲಿ ಚಿಕಿತ್ಸೆ ಸಿಗದೆ ಬಲಗೈ ಮೊಣಕೈ ಕೆಳಭಾಗವನ್ನು ಕಳೆದುಕೊಂಡಿದ್ದರು. ಆದರೂ ಧೃತಿಗೆಡದೆ ರಸ್ತೆಯಲ್ಲಿ ಓಡಿ ಅಭ್ಯಾಸ ನಡೆಸಿದ ಇವರು, ಕೋಚ್ ವೈಜಿನಾಥ್ ಕಾಳೆ ಮಾರ್ಗದರ್ಶನದಲ್ಲಿ ವೃತ್ತಿಪರ ಅಥ್ಲೀಟ್ ಆದರು. 2022ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ 100ನೇ ಪದಕ ತಂದುಕೊಟ್ಟಿದ್ದ ಇವರು, 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲೂ ಫೈನಲ್ ತಲುಪಿದ್ದರು.

ಲಾಂಗ್ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್‌ಗೆ ಬೆಳ್ಳಿ

ಭಾರತದ ನಂಬಿಗಸ್ತ ಅಥ್ಲೀಟ್ ಮುರಳಿ ಶ್ರೀಶಂಕರ್ ಪುರುಷರ ಲಾಂಗ್ ಜಂಪ್ ವಿಭಾಗದಲ್ಲಿ ಅದ್ಭುತ ಜಿಗಿತದೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *