ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಯಲ್ಲಿ ಹಣ ಹೂಡಿಕೆ ಮಾಡಿರುವ ನೌಕರರಿಗೆ ನಿವೃತ್ತಿಯ ನಂತರದ ನಿಯಮಗಳ ಕುರಿತು ಇಪಿಎಫ್ಒ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ನಿವೃತ್ತಿಯ ನಂತರ ಅಥವಾ ಕೆಲಸ ತೊರೆದ ನಂತರ ಇಪಿಎಫ್ ಖಾತೆಯಲ್ಲಿರುವ ಹಣವನ್ನು ಹಿಂಪಡೆಯದೇ ಅಥವಾ ಹೊಸ ಖಾತೆಗೆ ವರ್ಗಾಯಿಸದೇ ದೀರ್ಘಕಾಲ ಹಾಗೆಯೇ ಬಿಟ್ಟರೆ, ಖಾತೆಯು ‘ಇನ್ಆಪರೇಟಿವ್’ (Inoperative / ನಿಷ್ಕ್ರಿಯ) ಆಗುವ ಸಾಧ್ಯತೆಯಿದೆ. ಇದರಿಂದ ನಿವೃತ್ತಿ ನಿಧಿಯ ಮೇಲಿನ ಬಡ್ಡಿ ನಷ್ಟವಾಗಬಹುದು ಎಂದು ಇಪಿಎಫ್ಒ ಎಚ್ಚರಿಸಿದೆ.
ಖಾತೆ ‘ನಿಷ್ಕ್ರಿಯ’ ಆಗುವುದು ಯಾವಾಗ?
58 ವರ್ಷಗಳ ವರೆಗೆ ಬಡ್ಡಿ ಸೌಲಭ್ಯ: ಇಪಿಎಫ್ಒ ನಿಯಮಗಳ ಪ್ರಕಾರ, ಯಾವುದೇ ಚಂದಾದಾರರು ಕೆಲಸಕ್ಕೆ ರಾಜೀನಾಮೆ ನೀಡಿದರೂ ಅಥವಾ 55 ವರ್ಷಕ್ಕಿಂತ ಮೊದಲು ನಿವೃತ್ತಿ ಹೊಂದಿದರೂ, ಅವರ ಖಾತೆಗೆ 58 ವರ್ಷ ತುಂಬುವವರೆಗೆ ಇಪಿಎಫ್ಒ ಬಡ್ಡಿ ನೀಡುತ್ತಲೇ ಇರುತ್ತದೆ.
36 ತಿಂಗಳ ನಿಯಮ: ನೌಕರನು 55 ವರ್ಷ ಪೂರೈಸಿ ನಿವೃತ್ತಿ ಹೊಂದಿದ ನಂತರ, ಅಥವಾ 58 ವರ್ಷ ತಲುಪಿದ ಮೇಲೆಯೂ ಸತತ 36 ತಿಂಗಳು (3 ವರ್ಷ) ಯಾವುದೇ ವಹಿವಾಟು ನಡೆಸದಿದ್ದರೆ ಅಥವಾ ಹಣ ಹಿಂಪಡೆಯದಿದ್ದರೆ ಆ ಖಾತೆಯನ್ನು ‘ಇನ್ಆಪರೇಟಿವ್’ ಅಥವಾ ನಿಷ್ಕ್ರಿಯ ಖಾತೆ ಎಂದು ಪರಿಗಣಿಸಲಾಗುತ್ತದೆ.
ಬಡ್ಡಿ ನಿಲ್ಲುವುದು ಯಾವಾಗ?: ಖಾತೆಯು ನಿಷ್ಕ್ರಿಯಗೊಂಡ ನಂತರ, ಅದರಲ್ಲಿರುವ ಠೇವಣಿಗೆ ಇಪಿಎಫ್ಒ ಬಡ್ಡಿ ಜಮಾ ಮಾಡುವುದನ್ನು ಸ್ಥಗಿತಗೊಳಿಸುತ್ತದೆ.
55 ವರ್ಷಕ್ಕಿಂತ ಮುಂಚೆ ನಿವೃತ್ತರಾದವರು ಏನು ಮಾಡಬೇಕು?
ಸಾಮಾನ್ಯವಾಗಿ ಭಾರತದಲ್ಲಿ ನೌಕರರ ನಿವೃತ್ತಿ ವಯಸ್ಸು 58 ವರ್ಷಗಳು. ಆದರೆ 10 ವರ್ಷಗಳ ಸೇವೆ ಪೂರ್ಣಗೊಳಿಸಿ 55 ವರ್ಷಕ್ಕಿಂತ ಮುಂಚಿತವಾಗಿ ನಿವೃತ್ತಿ ಹೊಂದಿದ ನೌಕರರು ತಮ್ಮ ಇಪಿಎಫ್ ಖಾತೆಯ ಮೇಲೆ ವಿಶೇಷ ನಿಗಾ ವಹಿಸಬೇಕು.
ಅಂತಹ ಚಂದಾದಾರರು ತಮ್ಮ 58 ನೇ ವಯಸ್ಸಿನಲ್ಲಿ ಖಾತೆಯಲ್ಲಿರುವ ಪೂರ್ಣ ಹಣವನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ನಂತರ ಬಡ್ಡಿ ಆದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಇಪಿಎಫ್ಒ ತನ್ನ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕಸದಿಂದ ರಸ ಅಂದ್ರೆ ಇದೇ ನೋಡಿ!: ಮಂಗಳೂರಲ್ಲಿ ಒಣ ಕಸದಿಂದ ತಯಾರಾಗ್ತಿದೆ ಕೈಗಾರಿಕಾ ಇಂಧನ; ರಾಜ್ಯದಲ್ಲೇ ಮೊದಲ ಪ್ರಯೋಗ ಯಶಸ್ವಿ
ಇಪಿಎಫ್ ಹಣ ನಷ್ಟವಾಗದಂತೆ ತಡೆಯಲು ಜಾಗರೂಕತಾ ಕ್ರಮಗಳು:
ಹೊಸ ಕೆಲಸಕ್ಕೆ ಸೇರಿದರೆ ವರ್ಗಾವಣೆ ಮಾಡಿ: ಕೆಲಸ ಬದಲಾಯಿಸಿದ ಸಂದರ್ಭದಲ್ಲಿ ಹಳೆಯ ಇಪಿಎಫ್ ಖಾತೆಯ ಹಣವನ್ನು ಯುಎಎನ್ (UAN) ಮೂಲಕ ನೂತನ ಇಪಿಎಫ್ ಖಾತೆಗೆ ತಕ್ಷಣ ವರ್ಗಾಯಿಸಿಕೊಳ್ಳಿ.
ನಿವೃತ್ತಿಯ ನಂತರ ಹಣ ಹಿಂಪಡೆಯಿರಿ: 58 ವರ್ಷ ತಲುಪಿದ ತಕ್ಷಣ ನಿಮ್ಮ ಇಪಿಎಫ್ಒ ಖಾತೆಯ ಹಣ ಹಾಗೂ ಪಿಂಚಣಿ ಸೌಲಭ್ಯವನ್ನು ಕ್ಲೈಮ್ ಮಾಡಿಕೊಳ್ಳುವುದು ಸೂಕ್ತ.
ಕೆವೈಸಿ (KYC) ಅಪ್ಡೇಟ್ ಮಾಡಿ: ಬ್ಯಾಂಕ್ ಖಾತೆ, ಆಧಾರ್ ಮತ್ತು ಪಾನ್ ಸಂಖ್ಯೆ ಯುಎಎನ್ನೊಂದಿಗೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

