ಮಂಗಳೂರು: ಪರಿಸರ ಸಂರಕ್ಷಣೆ ಮತ್ತು ವೈಜ್ಞಾನಿಕ ಕಸ ವಿಲೇವಾರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ರಾಜ್ಯದಲ್ಲೇ ಅತ್ಯಂತ ಅಪರೂಪದ ಮೈಲಿಗಲ್ಲು ಸ್ಥಾಪಿಸಿದೆ. ಮಂಗಳೂರು ಸಮೀಪದ ಕೆಮ್ರಾಲ್‌ನಲ್ಲಿ ಮರುಬಳಕೆ ಮಾಡಲು ಸಾಧ್ಯವಾಗದ ಒಣ ಕಸವನ್ನು ಅತ್ಯಧಿಕ ಶಾಖೋತ್ಪನ್ನ ಸಾಮರ್ಥ್ಯ ಹೊಂದಿರುವ ‘ಇಂಧನ ಉಂಡೆಗಳನ್ನಾಗಿ’ (Dry Waste-to-Fuel Pellets) ಪರಿವರ್ತಿಸುವ ವಿಶೇಷ ಘಟಕವನ್ನು ಆರಂಭಿಸಲಾಗಿದೆ. ಇಂತಹ ತಂತ್ರಜ್ಞಾನ ಹೊಂದಿದ ಕರ್ನಾಟಕದ ಮೊದಲ ಘಟಕ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಕಳೆದ 15 ದಿನಗಳ ಹಿಂದಷ್ಟೇ ಈ ಮಹತ್ವದ ಘಟಕವನ್ನು ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಲಾಗಿದೆ.
ಇದುವರೆಗೆ ಯಾವುದೇ ರೀತಿಯ ಮರುಬಳಕೆಗೆ ಬಾರದ, ಕಸ ಎಂದು ಮೂಲೆಗೆ ಎಸೆಯಲಾಗುತ್ತಿದ್ದ ಹಳೆಯ ಬಟ್ಟೆಗಳು, ಪಾದರಕ್ಷೆಗಳು (Footwear), ಏಕಬಳಕೆಯ ಪ್ಲಾಸ್ಟಿಕ್ ಹಾಗೂ ಇತರ ಒಣ ತ್ಯಾಜ್ಯಗಳನ್ನು ಸಂಸ್ಕರಿಸಿ, ಅದರಿಂದ ‘ರೆಫ್ಯೂಸ್ ಡಿರೈವ್ಡ್ ಫ್ಯುಯೆಲ್’ (RDF) ಪೆಲೆಟ್‌ಗಳನ್ನು (ಸಣ್ಣ ಉಂಡೆಗಳು) ಇಲ್ಲಿ ತಯಾರಿಸಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ನರವಾಡೆ ವಿನಾಯಕ್ ಕಾರ್ಭಾರಿ, “ಮಹಾರಾಷ್ಟ್ರದಲ್ಲಿರುವ ಇಂತಹದ್ದೇ ಒಂದು ಘಟಕಕ್ಕೆ ಅಧ್ಯಯನ ಪ್ರವಾಸ ಕೈಗೊಂಡ ಬಳಿಕ ಈ ಯೋಜನೆಯನ್ನು ರೂಪಿಸಲಾಯಿತು.
ಯಂತ್ರೋಪಕರಣಗಳಿಗಾಗಿ ಸುಮಾರು 50 ಲಕ್ಷ ರೂ. ವೆಚ್ಚ ಮಾಡಲಾಗಿದ್ದು, ಕೆಮ್ರಾಲ್‌ನಲ್ಲಿರುವ ಒಣ ಕಸ ಸಂಸ್ಕರಣಾ ಶೆಡ್ ಅನ್ನು ಇದಕ್ಕಾಗಿ ಮೇಲ್ದರ್ಜೆಗೆ ಏರಿಸಲಾಗಿದೆ,” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಾಣಿ–ಸಂಪಾಜೆ ಹೆದ್ದಾರಿ ದುರಸ್ತಿಗೆ 49.22 ಕೋಟಿ ರೂ. ವಿಶೇಷ ಅನುದಾನ ಮಂಜೂರು; ಚತುಷ್ಪಥ ಯೋಜನೆಗೆ ವೇಗ
ಕಲ್ಲಿದ್ದಲಿಗೆ ಪರ್ಯಾಯ: ಇಲ್ಲಿದೆ ಸೂಪರ್ ಬಿಸಿನೆಸ್ ಪ್ಲಾನ್;
ಕಲ್ಲಿದ್ದಲಿಗೆ ಪರ್ಯಾಯ: ಈ ಘಟಕದಲ್ಲಿ ತಯಾರಾಗುವ ಹೈ-ಕ್ಯಾಲೋರಿಫಿಕ್ ಮೌಲ್ಯದ ಪೆಲೆಟ್‌ಗಳನ್ನು ಕೈಗಾರಿಕಾ ಬಾಯ್ಲರ್‌ಗಳಲ್ಲಿ (Industrial Boilers) ಕಲ್ಲಿದ್ದಲಿನ ಬದಲಿಗೆ ಇಂಧನವಾಗಿ ಬಳಸಬಹುದು. ಇದರಿಂದ ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
ಬೈ-ಬ್ಯಾಕ್ ಒಪ್ಪಂದ: ತಯಾರಾದ ಇಂಧನ ಉಂಡೆಗಳ ಮಾರಾಟಕ್ಕಾಗಿ ಪುಣೆ ಮೂಲದ ಕಂಪನಿಯೊಂದಿಗೆ ಜಿ.ಪಂ ಒಪ್ಪಂದ ಮಾಡಿಕೊಂಡಿದೆ. ಕಂಪನಿಯು ಪ್ರತಿ ಕೆಜಿಗೆ 5 ರೂಪಾಯಿಯಂತೆ ತಿಂಗಳಿಗೊಮ್ಮೆ ಈ ಪೆಲೆಟ್‌ಗಳನ್ನು ಮರುಖರೀದಿ ಮಾಡಲಿದೆ.
ಸಾಮರ್ಥ್ಯ: ಈ ಪೈಲಟ್ ಪ್ಲಾಂಟ್ ದಿನಕ್ಕೆ 2 ಟನ್ ಕಸ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, ತಿಂಗಳಿಗೆ 25 ದಿನ ಕಾರ್ಯನಿರ್ವಹಿಸಿದರೆ ಸುಮಾರು 50 ಟನ್ ಇಂಧನ ಉಂಡೆಗಳನ್ನು ಉತ್ಪಾದಿಸಬಹುದಾಗಿದೆ.
ಸಾರಿಗೆ ವೆಚ್ಚಕ್ಕೆ ಬಿತ್ತು ಬ್ರೇಕ್, ಮಹಿಳೆಯರಿಗೆ ಉದ್ಯೋಗ:
ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಂಆರ್‌ಎಫ್ (MRF) ಕೇಂದ್ರಗಳಿಂದ ಮರುಬಳಕೆ ಮಾಡಲಾಗದ ಕಸವನ್ನು ಸಿಮೆಂಟ್ ಕಾರ್ಖಾನೆಗಳಿರುವ ಬೆಳಗಾವಿ ಮತ್ತು ಕಲ್ಬುರ್ಗಿಗೆ ಸಾಗಿಸಲಾಗುತ್ತಿತ್ತು. ಇದಕ್ಕೆ ಪ್ರತಿ ಟ್ರಕ್ ಲೋಡ್‌ಗೆ ಅಂದಾಜು 48,000 ರೂ. ವೆಚ್ಚವಾಗುತ್ತಿತ್ತು. ಈಗ ಸ್ಥಳೀಯವಾಗಿಯೇ ಸಂಸ್ಕರಣೆ ನಡೆಯುವುದರಿಂದ ಭಾರಿ ಸಾರಿಗೆ ವೆಚ್ಚ ಉಳಿತಾಯವಾಗಲಿದೆ.
ಪ್ರಸ್ತುತ ಈ ಘಟಕವನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ (NRLM) ‘ಕೋರ್ದಬ್ಬು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ’ ನಿರ್ವಹಿಸುತ್ತಿದ್ದು, ಐದು ಜನರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಜಿಲ್ಲೆಯ ಉಳಿದ ಎಂಆರ್‌ಎಫ್ ಕೇಂದ್ರಗಳಲ್ಲೂ ಇಂತಹ ಪ್ಲಾಂಟ್‌ಗಳನ್ನು ಸ್ಥಾಪಿಸಲು ಜಿ.ಪಂ ನಿರ್ಧರಿಸಿದೆ.

