ತಿರುವನಂತಪುರಂ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ. ಮುಂಬರುವ ಬಹುನಿರೀಕ್ಷಿತ ‘ಕೇರಳ ಕ್ರಿಕೆಟ್ ಲೀಗ್’ (KCL 2026) ಟೂರ್ನಿಯ ಮೂರನೇ ಆವೃತ್ತಿಯಿಂದ ಸಂಜು ಸ್ಯಾಮ್ಸನ್ ದಿಢೀರನೆ ಹಿಂದೆ ಸರಿದಿದ್ದಾರೆ.
ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಅವರ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರುತ್ತಿವೆ. ವಿಶ್ವಕಪ್ ತಂಡದಲ್ಲಿದ್ದರೂ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಗದಿದ್ದುದು ಮತ್ತು ಇತ್ತೀಚಿನ ಜಿಂಬಾಬ್ವೆ ಪ್ರವಾಸದ ತಂಡಕ್ಕೆ ಆಯ್ಕೆಯಾಗದ ಬೆನ್ನಲ್ಲೇ ಈಗ ರಾಜ್ಯ ಮಟ್ಟದ ಟೂರ್ನಿಯಿಂದಲೂ ಅವರು ದೂರ ಉಳಿದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹರಾಜು ಪ್ರಕ್ರಿಯೆಯಿಂದ ಸಂಜು ಔಟ್!
ತಿರುವನಂತಪುರಂನಲ್ಲಿ ನಡೆಯಲಿರುವ ಕೇರಳ ಕ್ರಿಕೆಟ್ ಲೀಗ್‌ನ ಹರಾಜು ಪ್ರಕ್ರಿಯೆಗೆ (KCL Auction) ಸಂಜು ಸ್ಯಾಮ್ಸನ್ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ ಎಂದು ವರದಿಗಳು ತಿಳಿಸಿವೆ. ಈ ಬಾರಿಯ ಹರಾಜಿನಲ್ಲಿ ಒಟ್ಟು 156 ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಕೇರಳ ಕ್ರಿಕೆಟ್‌ನ ಅತಿ ದೊಡ್ಡ ಐಕಾನ್ ಎನಿಸಿಕೊಂಡಿರುವ ಸಂಜು ಹೆಸರು ಲಿಸ್ಟ್‌ನಲ್ಲಿ ಇಲ್ಲದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇದಕ್ಕೂ ಮುನ್ನ ‘ಕೊಚ್ಚಿ ಬ್ಲೂ ಟೈಗರ್ಸ್’ ತಂಡವು ಸಂಜು ಅವರನ್ನು ರಿಲೀಸ್ ಮಾಡಿತ್ತು. ಅವರು ಹರಾಜಿನಲ್ಲಿ ಭಾಗವಹಿಸಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು, ಆದರೆ ಸಂಜು ಟೂರ್ನಿಯಿಂದಲೇ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ: ಸಾಲ್ಟ್-ಬ್ರೂಕ್ ಅಬ್ಬರಕ್ಕೆ ಮಣಿದ ಭಾರತ, T20 ಸರಣಿ ಇಂಗ್ಲೆಂಡ್ ಪಾಲು
ಕೆಸಿಎಲ್ (KCL) ಟೂರ್ನಮೆಂಟ್‌ಗೆ ದೊಡ್ಡ ಹಿನ್ನಡೆ:
ಸಂಜು ಸ್ಯಾಮ್ಸನ್ ಈಗಾಗಲೇ ಕೇರಳ ಕ್ರಿಕೆಟ್ ಅಸೋಸಿಯೇಷನ್‌ಗೆ (KCA) ತಮ್ಮ ಅಧಿಕೃತ ನಿರ್ಧಾರವನ್ನು ತಿಳಿಸಿದ್ದಾರೆ. ಕೇರಳ ಮಾತ್ರವಲ್ಲದೆ ದೇಶ-ವಿದೇಶಗಳಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿರುವ ಸಂಜು, ಈ ಲೀಗ್‌ನ ಪ್ರಮುಖ ಆಕರ್ಷಣೆಯಾಗಿದ್ದರು. ಈಗ ಅವರ ಅನುಪಸ್ಥಿತಿ ಟೂರ್ನಿಯ ಜನಪ್ರಿಯತೆ ಹಾಗೂ ಪ್ರಸಾರಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂದು ಕ್ರೀಡಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಸೀಸನ್‌ನ ಅತ್ಯಂತ ದುಬಾರಿ ಆಟಗಾರ:
ಕಳೆದ ಸೀಸನ್‌ನಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ತಂಡವು ಸಂಜು ಸ್ಯಾಮ್ಸನ್ ಅವರನ್ನು ಬರೋಬ್ಬರಿ 26.80 ಲಕ್ಷ ರೂಪಾಯಿಗೆ ಖರೀದಿಸುವ ಮೂಲಕ ಲೀಗ್‌ನ ಅತ್ಯಂತ ದುಬಾರಿ ಆಟಗಾರನನ್ನಾಗಿ ಮಾಡಿತ್ತು. ಕೆಸಿಎಲ್ ಮೂರನೇ ಆವೃತ್ತಿಯು ಆಗಸ್ಟ್ 20 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದ್ದು, ಸಂಜು ಟೆಸ್ಟ್ ತಂಡದ ಭಾಗವಾಗಿಲ್ಲದಿದ್ದರೂ ಲೀಗ್‌ನಿಂದ ಏಕೆ ದೂರ ಉಳಿದಿದ್ದಾರೆ ಎಂಬ ಗೊಂದಲ ಎಲ್ಲರನ್ನೂ ಕಾಡುತ್ತಿದೆ. ಟಿ20 ವಿಶ್ವಕಪ್ ಬಳಿಕ ಸರಣಿ ಅವಕಾಶಗಳಿಂದ ವಂಚಿತರಾಗಿರುವ ಸಂಜು, ಈಗ ತವರು ಲೀಗ್‌ನಿಂದಲೂ ಹಿಂದೆ ಸರಿದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

