ದೆಹಲಿ: ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಪ್ರಯಾಣಿಕನೊಬ್ಬನ ಹ್ಯಾಂಡ್ಬ್ಯಾಗ್ನಲ್ಲಿ ಕರಪಾಲ (ಮಂಡೆಬುರೊ) ಪತ್ತೆಯಾಗಿದ್ದು, ತೀವ್ರ ಸಂಚಲನ ಮೂಡಿಸಿದೆ. ದೆಹಲಿಯಿಂದ ಹೈದರಾಬಾದ್ಗೆ ತೆರಳಲು ವಿಮಾನ ಏರಲು ಸಿದ್ಧನಾಗಿದ್ದ ವ್ಯಕ್ತಿಯಿಂದ ಈ ಕರಪಾಲವನ್ನು ವಶಪಡಿಸಿಕೊಳ್ಳಲಾಗಿದ್ದು, ಅದು ‘ಕಂಗೋಲಿ’ ಅಥವಾ ‘ಕೋತಿಯ ಮಂಡೆಬುರೊ’ ಎಂದು ಆತ ಕ್ಲೈಮ್ ಮಾಡಿದ್ದಾನೆ.
ವಿಮಾನ ಏರುವ ಮುನ್ನ ಭದ್ರತಾ ತನಿಖೆ (Pre-embarkation screening) ನಡೆಸುತ್ತಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ, ಪ್ರಯಾಣಿಕನ ಕೈಚೀಲದಲ್ಲಿ ಅನುಮಾನಾಸ್ಪದ ವಸ್ತುವಿರುವುದನ್ನು ಗಮನಿಸಿದರು. ಅನುಮಾನಗೊಂಡು ಬ್ಯಾಗ್ ಅನ್ನು ಸಂಪೂರ್ಣವಾಗಿ ತಪಾಸಣೆಗೊಳಪಡಿಸಿದಾಗ ಅದರೊಳಗೆ ಅಡಗಿಸಿಟ್ಟಿದ್ದ ಕರಪಾಲ ಪತ್ತೆಯಾಗಿದೆ. ಸಿಬ್ಬಂದಿ ತೀವ್ರ ವಿಚಾರಣೆ ನಡೆಸಿದಾಗ, “ಇದು ಕೋತಿಯ ಮಂಡೆಬುರೊ” ಎಂದು ಪ್ರಯಾಣಿಕ ಹೇಳಿಕೆ ನೀಡಿದ್ದಾನೆ.
ವಿಮಾನ ನಿಲ್ದಾಣದ ನಿಯಮ ಹಾಗೂ ವನ್ಯಜೀವಿ ಕಾಯ್ದೆಯಡಿ ಇದನ್ನು ಅಪರಾಧವೆಂದು ಪರಿಗಣಿಸಿದ ಅಧಿಕಾರಿಗಳು, ಪ್ರಯಾಣಿಕನಿಗೆ ಪ್ರಯಾಣಿಸಲು ಅನುಮತಿ ನೀಡದೆ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವಶಪಡಿಸಿಕೊಂಡ ಕರಪಾಲವನ್ನು ವಿಧಿವಿಜ್ಞಾನ (Forensic) ಪರೀಕ್ಷೆಗೆ ರವಾನಿಸಲಾಗಿದೆ.
ವಿಧಿವಿಜ್ಞಾನ ವರದಿಯಲ್ಲಿ ಅದು ನಿಜವಾಗಿಯೂ ಕೋತಿಯ ಮಂಡೆಬುರೊ ಎಂದು ದೃಢಪಟ್ಟರೆ, ಆ ವ್ಯಕ್ತಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (Wildlife Protection Act, 1972) ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಡ್ಯಾನ್ಸ್ ಚಿತ್ರೀಕರಣದಲ್ಲಿ ರಶ್ಮಿಕಾ ಮಂದಣ್ಣಗೆ ಅಪರೂಪದ ಹಿಪ್ ಇಂಜುರಿ! ರಣಬಾಳಿ ಅಥವಾ ಮೈಸಾ ಶೂಟಿಂಗ್ ವಿಳಂಬ
ತನಿಖೆ ಚುರುಕು:
ಈ ಕರಪಾಲವನ್ನು ವ್ಯಕ್ತಿ ಎಲ್ಲಿಂದ ಮತ್ತು ಯಾರಿಂದ ಪಡೆದುಕೊಂಡಿದ್ದ?
ದೆಹಲಿಯಿಂದ ಹೈದರಾಬಾದ್ಗೆ ಇದನ್ನು ಕೊಂಡೊಯ್ಯಲು ಮುಖ್ಯ ಕಾರಣವೇನು?
ಇದರ ಹಿಂದಿನ ಉದ್ದೇಶ ಅಥವಾ ಜಾಲವೇನು?
ಎಂಬಿಹೂವಿಷಯಗಳ ಕುರಿತು ದೆಹಲಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ವಿಮಾನಗಳಲ್ಲಿ ಚಿನ್ನ, ಹಣ ಅಥವಾ ನಿಷೇಧಿತ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿ ಸಿಕ್ಕಿಬೀಳುವುದು ಸಾಮಾನ್ಯ. ಆದರೆ ಈ ರೀತಿ ಮಂಡೆಬುರೊ ಕೊಂಡೊಯ್ಯಲು ಯತ್ನಿಸಿ ಸಿಕ್ಕಿಬಿದ್ದಿರುವುದು ಭದ್ರತಾ ಸಿಬ್ಬಂದಿಯನ್ನೂ ಅಚ್ಚರಿಗೆ ತಳ್ಳಿದೆ.

