ಬಂಟ್ವಾಳ: “ವಿದ್ಯಾರ್ಥಿ ಜೀವನ ಎಂಬುದು ಕೇವಲ ನಾಲ್ಕು ಗೋಡೆಗಳ ನಡುವೆ ಕುಳಿತು ಪುಸ್ತಕ ಓದುವುದಕ್ಕೆ ಸೀಮಿತವಲ್ಲ; ಅದು ವ್ಯಕ್ತಿತ್ವದ ಸಮಗ್ರ ವಿಕಾಸದ ಸಮಯ. ಶಿಕ್ಷಣ ಜ್ಞಾನವನ್ನು ನೀಡಿದರೆ, ಕ್ರೀಡೆಯು ಜೀವನದ ಮೌಲ್ಯಗಳನ್ನು ಕಲಿಸುತ್ತದೆ” ಎಂದು ಬಿ.ಸಿ. ರೋಡ್‌ನ ತುಂಬೆ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕವಿತಾ ಕೆ. ಅಭಿಪ್ರಾಯಪಟ್ಟಿದ್ದಾರೆ.
ತುಂಬೆ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರೀಡಾ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾಂಗಣದಲ್ಲಿ ಸಿಗುವ ಅನುಭವಗಳು ಎಂದಿಗೂ ತರಗತಿಯ ಕೋಣೆಯಲ್ಲಿ ಸಿಗುವುದಿಲ್ಲ. ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಈ ವಿದ್ಯಾಸಂಸ್ಥೆಯ ಕ್ರೀಡಾ ಸಂಘವು ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಹೊರತರಲು ಸೂಕ್ತ ವೇದಿಕೆಯಾಗಲಿ” ಎಂದು ಹಾರೈಸಿದರು.
ಇದನ್ನೂ ಓದಿ: ಆರ್‌ಆರ್‌ಬಿ ಜೆಇ ಹುದ್ದೆಗಳ ಸಂಖ್ಯೆ ಹೆಚ್ಚಳ: 4,029 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ
“ಆಟದಲ್ಲಿ ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಸೋತಾಗ ನಿರಾಸೆಗೊಳ್ಳದೆ, ಅದನ್ನು ಮುಂದಿನ ಗೆಲುವಿನ ಮೆಟ್ಟಿಲಾಗಿ ಮಾಡಿಕೊಳ್ಳಬೇಕು” ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಬಿ. ಅವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಾಯಿರಾಮ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನಾ ಗೊನ್ಸಾಲ್ವಿಸ್ ಧನ್ಯವಾದ ಸಮರ್ಪಿಸಿದರು.
