ಹಿಂದೆ ಹಿರಿಯ ವಯಸ್ಕರಿಗೆ ಮಾತ್ರ ಸೀಮಿತವೆನ್ನಲಾಗಿದ್ದ ‘ಹೃದಯಾಘಾತ’ (Heart Attack) ಇಂದು 30ರ ಹರಯದ ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ ಯುವಕರನ್ನೂ ತೀವ್ರವಾಗಿ ಬಾಧಿಸುತ್ತಿದೆ. ದೈಹಿಕವಾಗಿ ಆರೋಗ್ಯವಾಗಿದ್ದಾರೆಂದು ತೋರುವ ಫಿಟ್ನೆಸ್ ಪ್ರೇಮಿಗಳು ಹಾಗೂ ವೃತ್ತಿಪರರಲ್ಲೂ ಹೃದಯಾಘಾತ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶ್ವದ ಒಟ್ಟು ಹೃದಯ ಸಂಬಂಧಿ ಕಾಯಿಲೆಗಳ ಪೈಕಿ ಶೇ.60ರಷ್ಟು ಪ್ರಕರಣಗಳು ಭಾರತದಲ್ಲೇ ಕಂಡುಬರುತ್ತಿರುವುದು ಗಂಭೀರ ಸಂಗತಿಯಾಗಿದೆ.
ಅಮೆರಿಕನ್ ಜರ್ನಲ್ ಆಫ್ ಕಾರ್ಡಿಯೋವಾಸ್ಕುಲರ್ ಡ್ರಗ್ಸ್ನ ಇತ್ತೀಚಿನ ಅಧ್ಯಯನ ಒಂದರ ಪ್ರಕಾರ, ನಿಯಮಿತವಾಗಿ ಮೆಟ್ಟಿಲುಗಳನ್ನು ಹತ್ತುವ ಅಭ್ಯಾಸ ಹೊಂದಿರುವವರಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಸಂಭವಿಸುವ ಸಾವು ಶೇ.39 ರಷ್ಟು ಕಡಿತಗೊಳ್ಳುತ್ತದೆ ಎಂದು ತಿಳಿಸಿದೆ.
ಯುವಜನತೆಯಲ್ಲಿ ಹೆಚ್ಚುತ್ತಿರುವ ಅಪಾಯಕ್ಕೆ ಕಾರಣಗಳೇನು?
ನವದೆಹಲಿಯ ಮ್ಯಾಕ್ಸ್ ಹೃದ್ರೋಗ ವಿಭಾಗದ ಮುಖ್ಯಸ್ಥರಾದ ಡಾ. ನವೀನ್ ಭಮ್ರಿ ಅವರ ಪ್ರಕಾರ, ವಂಶಪಾರಂಪರ್ಯ ಕಾಯಿಲೆಗಳ ಜೊತೆಗೆ ಇತ್ತೀಚಿನ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣ:
ಚಯಾಪಚಯ (Metabolic) ಸಮಸ್ಯೆಗಳು: 20 ಹಾಗೂ 30ರ ವಯಸ್ಸಿನಲ್ಲೇ ಅಧಿಕ ರಕ್ತದೊತ್ತಡ (Hypertension), ಕೊಲೆಸ್ಟ್ರಾಲ್, ಇನ್ಸುಲಿನ್ ಪ್ರತಿರೋಧ, ಸಕ್ಕರೆ ಕಾಯಿಲೆ (Diabetes), ಫ್ಯಾಟಿ ಲಿವರ್ ಹಾಗೂ ಪಿಸಿಒಎಸ್ (PCOS) ನಂತಹ ಸಮಸ್ಯೆಗಳು ಕಂಡುಬರುತ್ತಿದ್ದು, ಇವು ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗಲು (Atherosclerosis) ಕಾರಣವಾಗುತ್ತಿವೆ.
ಅಸಮರ್ಪಕ ಆಹಾರ ಪದ್ಧತಿ: ಸಂಸ್ಕರಿಸಿದ ಆಹಾರ (Ultra-processed foods), ಮೈದಾ, ಸಕ್ಕರೆ ಹಾಗೂ ಟ್ರಾನ್ಸ್ ಫ್ಯಾಟ್ಗಳ ಅತಿಯಾದ ಬಳಕೆ.
ಧೂಮಪಾನ ಹಾಗೂ ವಿಪಿಂಗ್ (Vaping): ನಿಯಮಿತ ಅಥವಾ ಅಪರೂಪಕ್ಕೊಮ್ಮೆ ಮಾಡುವ ಧೂಮಪಾನವೂ ರಕ್ತನಾಳಗಳನ್ನು ಹಾನಿಗೊಳಿಸಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ.
ಮಾನಸಿಕ ಒತ್ತಡ ಹಾಗೂ ನಿದ್ರಾಹೀನತೆ: ಸುದೀರ್ಘ ಕೆಲಸದ ಅವಧಿ, ಆರ್ಥಿಕ ಒತ್ತಡ ಹಾಗೂ ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯಿಂದ ದೇಹದಲ್ಲಿ ‘ಕಾರ್ಟಿಸೋಲ್’ (Cortisol) ಹಾರ್ಮೋನ್ ಮಟ್ಟ ಹೆಚ್ಚಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ.
ನಿರ್ಲಕ್ಷಿಸಬಾರದ ಪ್ರಮುಖ ಮುನ್ನೆಚ್ಚರಿಕಾ ಲಕ್ಷಣಗಳು:
ಹೃದಯಾಘಾತದ ಲಕ್ಷಣಗಳನ್ನು ಹೆಚ್ಚಾಗಿ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಎಂದು ತಪ್ಪಾಗಿ ಗ್ರಹಿಸಿ ನಿರ್ಲಕ್ಷಿಸಲಾಗುತ್ತದೆ. ಈ ಕೆಳಗಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು:
ಎದೆಯಲ್ಲಿ ಬಿಗಿತ, ಉರಿ ಅಥವಾ ಭಾರವೆನಿಸುವುದು (ಕೆಲಸ ಮಾಡುವಾಗ ಹೆಚ್ಚಿ, ವಿಶ್ರಾಂತಿ ಪಡೆದಾಗ ಕಡಿಮೆಯಾಗುವುದು).
ಎಡಗೈ, ದವಡೆ, ಕುತ್ತಿಗೆ ಅಥವಾ ಹೊಟ್ಟೆಯ ಮೇಲ್ಭಾಗಕ್ಕೆ ನೋವು ಹರಡುವುದು.
ಕಾರಣವಿಲ್ಲದೆ ವಿಪರೀತ ಬೆವರುವುದು, ಉಸಿರಾಟದ ತೊಂದರೆ ಮತ್ತು ವಾಕರಿಕೆ.
ಇದನ್ನೂ ಓದಿ: ಆರ್ಆರ್ಬಿ ಜೆಇ ಹುದ್ದೆಗಳ ಸಂಖ್ಯೆ ಹೆಚ್ಚಳ: 4,029 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ
ಹೃದ್ರೋಗ ಚಿಕಿತ್ಸೆಯಲ್ಲಿ ಆಧುನಿಕ ತಂತ್ರಜ್ಞಾನಗಳು:
ಹೃದ್ರೋಗ ನಿವಾರಣೆಗೆ ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಗಳಾಗಿವೆ:
ಆರಂಭಿಕ ತಪಾಸಣೆ: ಸುಧಾರಿತ ಇಸಿಜಿ ಹಾಗೂ ಹೈ-ರೆಸಲ್ಯೂಶನ್ ಕೊರೊನರಿ ಇಮೇಜಿಂಗ್ ಮೂಲಕ ರಕ್ತನಾಳಗಳ ಬ್ಲಾಕೇಜ್ಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚಬಹುದು.
ಆಂಜಿಯೋಪ್ಲ್ಯಾಸ್ಟಿ (Primary Angioplasty): ತುರ್ತು ಸಂದರ್ಭದಲ್ಲಿ ರಕ್ತಪರಿಚಲನೆಯನ್ನು ತಕ್ಷಣವೇ ಮರುಸ್ಥಾಪಿಸಲು ಇದು ಅತ್ಯಂತ ಪರಿಣಾಮಕಾರಿ ‘ಗೋಲ್ಡ್ ಸ್ಟ್ಯಾಂಡರ್ಡ್’ ಚಿಕಿತ್ಸೆಯಾಗಿದೆ.
TAVR ಚಿಕಿತ್ಸೆ: ತೆರೆದ ಹೃದಯ ಶಸ್ತ್ರಚಿಕಿ (Open-heart surgery) ಇಲ್ಲದೆಯೇ ತೊಡೆಯ ಭಾಗದ ರಕ್ತನಾಳದ ಮೂಲಕ ವಾಲ್ವ್ ಬದಲಾಯಿಸುವ ಕನಿಷ್ಠ ಆಕ್ರಮಣಕಾರಿ (Minimally invasive) ವಿಧಾನಗಳು ಇಂದು ಲಭ್ಯವಿವೆ.

