ದೆಹಲಿ: ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ರಾಜಧಾನಿ ದೆಹಲಿಯ ಜನತೆಗೆ ಕೇಂದ್ರ ಸರ್ಕಾರ ಭಾರಿ ಸಿಹಿ ಸುದ್ದಿ ನೀಡಿದೆ. ಮಹಾರಾಷ್ಟ್ರದ ನಾಸಿಕ್‌ನಿಂದ ಬಫರ್ ಸ್ಟಾಕ್‌ನಿಂದ ಸಂಗ್ರಹಿಸಲಾದ 800 ಟನ್ ತಾಜಾ ಈರುಳ್ಳಿಯನ್ನು ಹೊತ್ತು ತರುತ್ತಿರುವ ಮೊದಲ ‘ಖಾಂದಾ ಎಕ್ಸ್‌ಪ್ರೆಸ್’ (Kanda Express) ಸರಕು ರೈಲು ಬುಧವಾರ ನವದೆಹಲಿಯನ್ನು ತಲುಪಲಿದೆ.
ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖಾರೆ ಅವರು ನೀಡಿರುವ ಮಾಹಿತಿಯಂತೆ, ಈ ಈರುಳ್ಳಿಯನ್ನು ನೇಫೆಡ್ (NAFED), ಎನ್‌ಸಿಸಿಎಫ್ (NCCF) ಹಾಗೂ ಕೇಂದ್ರೀಯ ಭಂಡಾರ್ ಮಳಿಗೆಗಳ ಮೂಲಕ ಸಬ್ಸಿಡಿ ದರದಲ್ಲಿ ಪ್ರತಿ ಕೆಜಿಗೆ ₹35 ರಂತೆ ಮಾರಾಟ ಮಾಡಲಾಗುತ್ತದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸರಾಸರಿ ದರಕ್ಕಿಂತ ಶೇ. 36 ರಷ್ಟು ಅಗ್ಗವಾಗಿದೆ.
ವಿವಿಧ ನಗರಗಳಿಗೆ ಸರಕು ರೈಲುಗಳ ಮೂಲಕ ಈರುಳ್ಳಿ ಪೂರೈಕೆ:
ದೆಹಲಿ ಮಾತ್ರವಲ್ಲದೆ ದೇಶದ ಇತರ ಪ್ರಮುಖ ನಗರಗಳಾದ ಚೆನ್ನೈ, ಎರ್ನಾಕುಲಂ, ಮಧುರೈ ಹಾಗೂ ಗುವಾಹಾಟಿ ನಗರಗಳಿಗೂ ಪ್ರತ್ಯೇಕ ರೈಲುಗಳ (Dedicated Railway Rakes) ಮೂಲಕ ಬಲ್ಕ್ ಈರುಳ್ಳಿಯನ್ನು ತಲುಪಿಸಲಾಗುತ್ತಿದೆ. ಬೆಲೆ ಏರಿಕೆಯನ್ನು ತಡೆಗಟ್ಟಲು ನಾಸಿಕ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಬಫರ್ ಸ್ಟಾಕ್‌ನಿಂದ ಈ ಸೌಲಭ್ಯ ಕಲ್ಪಿಸಲಾಗಿದೆ.
ದೇಶಾದ್ಯಂತ ಈರುಳ್ಳಿಯ ಸರಾಸರಿ ಚಿಲ್ಲರೆ ಬೆಲೆಯು ಕೇವಲ ಒಂದು ತಿಂಗಳಲ್ಲಿ ಶೇ. 28 ಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ. ಜುಲೈ 25 ರಂದು ಕೆಜಿಗೆ 34.80 ರೂ. ಇದ್ದ ಬೆಲೆ, ಆಗಸ್ಟ್ 25 ರ ವೇಳೆಗೆ 44.72 ಕ್ಕೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ (₹28.67/kg) ಇದು ಶೇ. 56 ರಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: ಕಾಡಿನ ರಸ್ತೆಯಲ್ಲಿ ಆನೆಗೆ ನಿರಂತರ ಹಾರ್ನ್ ಹಾಕಿ ಮುನ್ನುಗ್ಗಿದ ಕಾರು ಚಾಲಕಿ: ಕೂದಲೆಳೆಯ ಅಂತರದಲ್ಲಿ ಭಾರಿ ದುರಂತ ಪಾರು
ವಿವಿಧ ನಗರಗಳ ಇಂದಿನ ಚಿಲ್ಲರೆ ಬೆಲೆ:
ಚೆನ್ನೈ ಹಾಗೂ ಕೋಲ್ಕತ್ತಾ: ಕೆಜಿಗೆ ₹60
ದೆಹಲಿ: ಕೆಜಿಗೆ ₹55
ಮುಂಬೈ: ಕೆಜಿಗೆ ₹48
ರಾಂಚಿ: ಕೆಜಿಗೆ ₹38
ಈರುಳ್ಳಿ ಲಭ್ಯತೆ ಕುರಿತು ಕೇಂದ್ರ ಸರ್ಕಾರದ ಸ್ಪಷ್ಟನೆ
ಹಬ್ಬಗಳ ಋತು, ಹವಾಮಾನ ವೈಪರೀತ್ಯ ಹಾಗೂ ಪೂರೈಕೆ ಸಾಲಿನಲ್ಲಿನ ವ್ಯತ್ಯಾಸಗಳಿಂದಾಗಿ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ ದೇಶದಲ್ಲಿ ಮುಂಬರುವ ತಿಂಗಳುಗಳಲ್ಲಿ ಈರುಳ್ಳಿ ಲಭ್ಯತೆಗೆ ಯಾವುದೇ ಅಭಾವವಿಲ್ಲ. 2025-26 ಸಾಲಿನಲ್ಲಿ ಅಂದಾಜು 307.37 ಲಕ್ಷ ಟನ್ ಈರುಳ್ಳಿ ಉತ್ಪಾದನೆಯಾಗುವ ನಿರೀಕ್ಷೆಯಿದ್ದು, ಇದು ಕಳೆದ ವರ್ಷದ ಉತ್ಪಾದನೆಗೆ (307.67 ಲಕ್ಷ ಟನ್) ಸಮಾನವಾಗಿದೆ ಎಂದು ಮೋದಿ ಸರ್ಕಾರ ಅಭಯ ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

