ಬೆಂಗಳೂರು: ಯಾವುದೇ ವ್ಯಕ್ತಿಯು ತನ್ನ ಹೆಂಡತಿಗೆ ಮನೆಯ ಕೆಲಸಗಳನ್ನು ಮಾಡಲು ಅಥವಾ ತನ್ನ ಹೆತ್ತವರನ್ನು ನೋಡಿಕೊಳ್ಳಲು ಆಜ್ಞಾಪಿಸಲು ಹಾಗೂ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ಆದೇಶ ಹೊರಡಿಸಿದೆ. ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ಚಿಲ್ಲಕೂರು ಸುಮಾಲತಾ ಅವರಿದ್ದ ಪೀಠವು ಈ ಪ್ರಮುಖ ತೀರ್ಪು ನೀಡಿದೆ.
ಮನೆ ಕೆಲಸಗಳನ್ನು ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಹಂಚಿಕೊಳ್ಳಬೇಕು. ಹೆತ್ತವರನ್ನು ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯವು ಮಗ ಅಥವಾ ಮಗಳಿಗೆ ಇರುತ್ತದೆಯೇ ವಿನಃ ಅಳಿಯ ಅಥವಾ ಸೊಸೆಗಲ್ಲ. ಅತ್ತೆ-ಮಾವಂದಿರನ್ನು ನೋಡಿಕೊಳ್ಳುವುದು ಸ್ವಯಂಪ್ರೇರಿತ ಕಾರ್ಯವಾಗಬೇಕೇ ಹೊರತು ಬಲವಂತದಿಂದಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿರುವ ವ್ಯಕ್ತಿ (36), ತುಮಕೂರು ಜಿಲ್ಲೆಯ ಗ್ರಾಮವೊಂದರಲ್ಲಿ ಅಪ್ರಾಪ್ತ ಮಗಳೊಂದಿಗೆ ವಾಸಿಸುತ್ತಿರುವ ತನ್ನ ಪತ್ನಿಗೆ (33) ತಿಂಗಳಿಗೆ ₹9,000 ಜೀವನಾಂಶ (Maintenance) ನೀಡುವಂತೆ ಕುಟುಂಬ ನ್ಯಾಯಾಲಯ 2025 ರ ನವೆಂಬರ್ನಲ್ಲಿ ನೀಡಿದ್ದ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದನು.
“ಪತ್ನಿಯು ನನ್ನ ಪೋಷಕರನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ, ಮನೆಕೆಲಸ ಮಾಡುತ್ತಿರಲಿಲ್ಲ ಮತ್ತು ನನ್ನ ಅಥವಾ ನನ್ನ ಪೋಷಕರ ಅನುಮತಿಯಿಲ್ಲದೆ ತವರು ಮನೆಗೆ ಹೋಗುತ್ತಿದ್ದಳು” ಎಂದು ವ್ಯಕ್ತಿ ಕೋರ್ಟ್ನಲ್ಲಿ ವಾದಿಸಿದ್ದನು.
“ಈ ವಾದವನ್ನು ಗಮನಿಸಿದರೆ, ಆತ ತನ್ನ ಹೆಂಡತಿಯನ್ನು ಮನೆಕೆಲಸ ಮಾಡಲು ಮತ್ತು ಹೆತ್ತವರನ್ನು ನೋಡಿಕೊಳ್ಳಲು ಕೆಲಸಕ್ಕೆ ಇಟ್ಟುಕೊಂಡ ಉದ್ಯೋಗಿಯಂತೆ ಭಾವಿಸಿರುವುದು ತಿಳಿಯುತ್ತದೆ. ಪತ್ನಿ ತನ್ನ ಹಾಗೂ ಹೆತ್ತವರ ಅನುಮತಿ ಇಲ್ಲದೆ ತವರು ಮನೆಗೆ ಹೋದಳು ಎನ್ನುವುದು ಆತನ ನಿಯಂತ್ರಣಾ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಇದನ್ನೂ ಓದಿ; ಹನೂರು ಗುಂಡಿನ ಚಕಮಕಿ: ಹತ್ತಿರದಿಂದಲೇ ಶೂಟ್ ಮಾಡಲಾಗಿತ್ತು; ಅರಣ್ಯ ಇಲಾಖೆ ವಾದಕ್ಕೆ ತಿರುಗುಬಾಣವಾದ ಮರಣೋತ್ತರ ಪರೀಕ್ಷೆ ವರದಿ
“ತನ್ನ ತಂದೆ-ತಾಯಿಯ ಮನೆಗೆ ಹೋಗಲು ಭಾರತೀಯ ಮಹಿಳೆಯು ಗಂಡನ ಮನೆಯಲ್ಲಿರುವ ಪ್ರತಿಯೊಬ್ಬರ ಅನುಮತಿ ಪಡೆಯಬೇಕು ಎಂಬುದನ್ನು ಈ ನ್ಯಾಯಾಲಯ ಒಪ್ಪುವುದಿಲ್ಲ. ಮದುವೆಯು ಇಬ್ಬರು ವ್ಯಕ್ತಿಗಳನ್ನು ಒಟ್ಟುಗೂಡಿಸುವ ಪವಿತ್ರ ಬಂಧವಾಗಿದೆ. ಪತ್ನಿಯ ಸಮರ್ಪಣಾ ಮನೋಭಾವವನ್ನು ಆಕೆಯ ವಿಧೇಯತೆಯಿಂದ ಅಳೆಯಲು ಸಾಧ್ಯವಿಲ್ಲ” ಎಂದು ಕೋರ್ಟ್ ತಿಳಿಸಿದೆ.
ಕುಟುಂಬ ನ್ಯಾಯಾಲಯವು ಪತ್ನಿಗೆ ತಿಂಗಳಿಗೆ ₹5,000 ಹಾಗೂ ಮಗಳಿಗೆ ₹4,000 ಸೇರಿ ಒಟ್ಟು ₹9,000 (ದಿನಕ್ಕೆ ಒಬ್ಬರಿಗೆ ₹150) ಜೀವನಾಂಶವನ್ನು ನಿಗದಿಪಡಿಸಿತ್ತು. “ಇಂದಿನ ದಿನಗಳಲ್ಲಿ ದುಬಾರಿ ಜೀವನ ವೆಚ್ಚವನ್ನು ನೋಡಿದರೆ, ಒಬ್ಬ ವ್ಯಕ್ತಿಗೆ ದಿನಕ್ಕೆ ₹150 ಜೀವನಾಂಶ ಕನಿಷ್ಠ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಆದ್ದರಿಂದ ಕುಟುಂಬ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ” ಎಂದು ಹೇಳಿದ ಹೈಕೋರ್ಟ್ ಅರ್ಜಿ ವಜಾಗೊಳಿಸಿತು.

