Breaking News

ಮೊಬೈಲ್ ಕೊಡಲಿಲ್ಲವೆಂದು ತಂಗಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಅಣ್ಣನಿಗೆ 5 ವರ್ಷ ಕಠಿಣ ಸಜೆ

ಮಂಗಳೂರು: ಮೊಬೈಲ್ ಫೋನ್ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಸ್ವಂತ ತಂಗಿಯನ್ನೇ ಸುತ್ತಿಗೆಯಿಂದ ಹೊಡೆದು ಕ್ರೂರವಾಗಿ ಕೊಂದಿದ್ದ ಅಪರಾಧಿಗೆ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಉಳ್ಳಾಲ ತಾಲೂಕಿನ ಕಂಬಳಪದವಿನ ನಿವಾಸಿ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾ ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದು, ಈತ ತನ್ನ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾಳನ್ನು ಹತ್ಯೆ ಮಾಡಿದ್ದನು.2019ರ ಅಕ್ಟೋಬರ್ 09 ರಂದು ಕಂಬಳಪದವಿನ ಮನೆಯಲ್ಲಿ ಫಿಯೋನಾ ಬಳಿ ಮೊಬೈಲ್ ಫೋನ್ ಕೇಳಿದಾಗ ಆಕೆ ಕೊಡಲು ನಿರಾಕರಿಸಿದ್ದಳು. ಇದರಿಂದ ಕೆರಳಿದ ಸ್ಯಾಮ್ಸನ್, ತಂಗಿಯ ತಲೆಗೆ ಸುತ್ತಿಗೆಯಿಂದ ಭೀಕರವಾಗಿ ಹೊಡೆದು ಕೊಲೆ ಮಾಡಿದ್ದನು.

ಕೊಲೆಯ ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಮನೆ ಹಿಂಭಾಗದ ಕಾಡಿಗೆ ಒಯ್ದು ಬಿಸಾಡಿದ್ದನು. ಕೆಲಸ ಮುಗಿಸಿ ಮನೆಗೆ ಬಂದ ಪೋಷಕರಿಗೆ ತಂಗಿ ಎಲ್ಲಿಯೋ ನಾಪತ್ತೆಯಾಗಿದ್ದಾಳೆ ಎಂದು ಸುಳ್ಳು ಕಥೆ ಹೇಳಿ ನಂಬಿಸಿದ್ದನು. ಇದನ್ನು ನಿಜವೆಂದು ನಂಬಿದ ಪೋಷಕರು ಕೋಣಾಜೆ ಪೊಲೀಸ್ ಠಾಣೆಯಲ್ಲಿ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿ ಹುಡುಕಾಟ ನಡೆಸಿದ್ದರು.

ಇದನ್ನೂ ಓದಿ: “ಹೆಂಡತಿಯನ್ನು ಮನೆಕೆಲಸ ಹಾಗೂ ಪೋಷಕರ ಆರೈಕೆಗೆ ಪತಿಯು ಆಜ್ಞಾಪಿಸುವಂತಿಲ್ಲ”: ಕರ್ನಾಟಕ ಹೈಕೋರ್ಟ್ ಆದೇಶ

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕೋಣಾಜೆ ಪೊಲೀಸರು ಸ್ಯಾಮ್ಸನ್‌ನ ಚಲನವಲನಗಳ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿತ್ತು. ಪೋಲಿಸರು ನಡೆಸಿದ ಚತುರ ತನಿಖೆಯಿಂದ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ನ್ಯಾಯಾಲಯವು ಅಪರಾಧಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *