ಮಾಸ್ಕೋ: ಉಕ್ರೇನ್ನಲ್ಲಿ ನಡೆಯುತ್ತಿರುವ ಸುದೀರ್ಘ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯೊಂದು ಜರುಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ದೂತ ಸ್ಟೀವ್ ವಿಟ್ಕಾಫ್ (Steve Witkoff) ಅವರೊಂದಿಗೆ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಸಭೆ ನಡೆಸಿದ ಬಳಿಕ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನವೆಂಬರ್ 10ರ ನಂತರ ಅಮೆರಿಕ ಹಾಗೂ ಉಕ್ರೇನ್ ಜೊತೆಗಿನ ತ್ರಿಪಕ್ಷೀಯ ಮಾತುಕತೆಗಳನ್ನು ಪುನರಾರಂಭಿಸಲು ತತ್ವಪೂರ್ವಕವಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕ್ರೆಮ್ಲಿನ್ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಯೂರಿ ಉಷಕೋವ್ (Yuri Ushakov) ತಿಳಿಸಿದ್ದಾರೆ.
ಯುದ್ಧ ಮುಕ್ತಾಯಗೊಂಡ ಬಳಿಕ ರಷ್ಯಾ ಮತ್ತು ಉಕ್ರೇನ್ಗೆ ಹೊಸ ಹಾಗೂ ಭದ್ರವಾದ ‘ಸುರಕ್ಷತಾ ವ್ಯವಸ್ಥೆಯನ್ನು ನಿರ್ಮಿಸುವುದು’ ಈ ಮಾತುಕತೆಗಳ ಮುಖ್ಯ ಅಜೆಂಡಾ ಆಗಿರಲಿದೆ ಎಂದು ಉಷಕೋವ್ ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಾಸ್ಕೋ ಮತ್ತು ಕೀವ್ ನಡುವಿನ ತೀವ್ರ ಭಿನ್ನಾಭಿಪ್ರಾಯಗಳಿಂದಾಗಿ ಕಳೆದ ಫೆಬ್ರವರಿಯಿಂದ ಸ್ಥಗಿತಗೊಂಡಿದ್ದ ಈ ಮೂರು ದೇಶಗಳ ರಾಜತಾಂತ್ರಿಕ ಮಾತುಕತೆಗೆ ಈಗ ಮರುಜೀವ ಸಿಕ್ಕಂತಾಗಿದೆ.
ಮಂಗಳವಾರ ನಾರ್ವೆಯ ಆಸ್ಲೋ ನಗರದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಹಾಗೂ ಫಿನ್ಲ್ಯಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಸ್ಟೀವ್ ವಿಟ್ಕಾಫ್, ಆ ಸಭೆಯ ಸಂಪೂರ್ಣ ವಿವರಗಳನ್ನು ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಮುಖತಃ ವಿವರಿಸಿದ್ದಾರೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

