ಉತ್ತರಾಖಂಡದಲ್ಲಿ ಮದ್ರಸಾ ರಜೆ ದಿನ ಬದಲಾವಣೆ: ಶುಕ್ರವಾರದ ಬದಲು ಇನ್ನು ಮುಂದೆ ಭಾನುವಾರವೇ ರಜೆ

ಡೆಹ್ರಾಡೂನ್: ಉತ್ತರಾಖಂಡದ ಪುಷ್ಕರ್‌ ಸಿಂಗ್‌ ಧಾಮಿ ನೇತೃತ್ವದ ರಾಜ್ಯ ಸರ್ಕಾರವು ಮದ್ರಸಾ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ ಮತ್ತೊಂದು ಕ್ರಾಂತಿಕಾರಿ ಹಾಗೂ ಮಹತ್ವದ ನಿರ್ಧಾರ ಕೈಗೊಂಡಿದೆ. ಮದ್ರಸಾಗಳಲ್ಲಿ ಇದುವರೆಗೆ ಜಾರಿಯಲ್ಲಿದ್ದ ಶುಕ್ರವಾರದ (Friday) ಸಾಪ್ತಾಹಿಕ ರಜೆಯನ್ನು ರದ್ದುಪಡಿಸಿರುವ ಸರ್ಕಾರ, ಇನ್ನು ಮುಂದೆ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಗೆ ಭಾನುವಾರವೇ (Sunday) ಅಧಿಕೃತ ರಜಾದಿನ ಎಂದು ಘೋಷಿಸಿದೆ. ರಾಜ್ಯದಲ್ಲಿ ಈಗಾಗಲೇ ಸಮಾನ ನಾಗರಿಕ ಸಂಹಿತೆ (UCC) ಜಾರಿಯಲ್ಲಿದ್ದು, ಶಿಕ್ಷಣದಲ್ಲೂ ಎಲ್ಲರಿಗೂ ಒಂದೇ ರೀತಿಯ ನಿಯಮಗಳು ಅನ್ವಯಿಸಬೇಕು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಡೆಹ್ರಾಡೂನ್ ಪೊಲೀಸ್ ಲೈನ್ಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ರಾಜ್ಯದಲ್ಲಿ ಈಗಾಗಲೇ ಸಮಾನ ನಾಗರಿಕ ಸಂಹಿತೆ ಜಾರಿಯಲ್ಲಿದೆ ಎಂದು ನೆನಪಿಸಿದರು. ಪ್ರತಿಯೊಬ್ಬರಿಗೂ ಏಕರೂಪದ ಕಾನೂನುಗಳು ಮತ್ತು ನಿಯಮಗಳು ಇರಬೇಕು ಎಂಬ ತತ್ವವೇ ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸುತ್ತದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಕಳೆದ ಜುಲೈ 1 ರಂದೇ ಉತ್ತರಾಖಂಡ ಸರ್ಕಾರವು ರಾಜ್ಯದಲ್ಲಿ ಸಾಂಪ್ರದಾಯಿಕ ಮದ್ರಸಾ ಶಿಕ್ಷಣ ವ್ಯವಸ್ಥೆಯನ್ನು ಅಧಿಕೃತವಾಗಿ ರದ್ದುಪಡಿಸಿತ್ತು. ಈ ದಿಟ್ಟ ಹೆಜ್ಜೆ ಇಟ್ಟ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಗೆ ಉತ್ತರಾಖಂಡ ಪಾತ್ರವಾಗಿತ್ತು. ಇದರ ಬೆನ್ನಲ್ಲೇ ಈಗ ರಜೆಯ ದಿನವನ್ನು ಕೂಡ ಭಾನುವಾರಕ್ಕೆ ಬದಲಾಯಿಸಲಾಗಿದೆ.

ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಪಕ್ಷ, ಇದೊಂದು ಕೇವಲ ‘ರಾಜಕೀಯ ಸ್ಟಂಟ್’ ಎಂದು ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ವಕ್ತಾರೆ ಡಾ. ಪ್ರತಿಮಾ ಸಿಂಗ್ ಮಾತನಾಡಿ, “ಮಸೀದಿಗಳು ಮತ್ತು ಮದ್ರಸಾಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಭಿವೃದ್ಧಿ ವಿಷಯಗಳತ್ತ ಸರ್ಕಾರದ ಗಮನವಿಲ್ಲ. ಶುಕ್ರವಾರದ ರಜೆಯನ್ನು ವಿಶೇಷ ನಮಾಜ್‌ಗಾಗಿ ನೀಡಲಾಗಿತ್ತು” ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಮದ್ರಸಾ ವ್ಯವಸ್ಥೆಯನ್ನು ಬುಡಮೇಲು ಮಾಡಲಾಗುತ್ತಿದ್ದು, ಉಳಿದ ಶಿಕ್ಷಣ ಸಂಸ್ಥೆಗಳ ದುಸ್ಥಿತಿಯ ಬಗ್ಗೆ ಯಾರು ಗಮನಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಸಮುದಾಯದ ಕೆಲ ಮುಖಂಡರು ಸಹ ಈ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಶಿಕ್ಷಕರು ಮತ್ತು ನಿರ್ವಾಹಕರಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಇಮ್ದಾದ್-ಉಲ್-ಉಲೂಮ್ ಸಂಯೋಜಕರಾದ ಶಾಮಾ ಖಾನ್ ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇನ್ನುಳಿದ ಕೆಲವು ಶಿಕ್ಷಕರು ಸರ್ಕಾರದ ಆದೇಶವನ್ನು ಪಾಲಿಸುವುದಾಗಿ ತಿಳಿಸುತ್ತಲೇ, ಒಂದು ವೇಳೆ ಶುಕ್ರವಾರ ಅರ್ಧ ದಿನದ ರಜೆ  ನೀಡಿದ್ದರೆ ವಿಶೇಷ ನಮಾಜ್ ಮಾಡಲು ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತವನ್ನು ವಿಭಜಿಸುವ ಕುತಂತ್ರ ಎಂದಿಗೂ ಯಶಸ್ವಿಯಾಗುವುದಿಲ್ಲ: ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದನೆ

ಮದ್ರಸಾ ಆದೇಶದ ರಾಜಕೀಯ ಗದ್ದಲದ ನಡುವೆಯೂ, ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಅವರು ಮಂಗಳವಾರ ಡೆಹ್ರಾಡೂನ್‌ನ ಪರೇಡ್ ಮೈದಾನದಲ್ಲಿ ‘ಬನ್ನು ಬಿರಾದರಿ’  ವತಿಯಿಂದ ಆಯೋಜಿಸಲಾಗಿದ್ದ ವಿಜಯದಶಮಿ (ದಸರಾ) ಮಹೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ರಾಜ್ಯದ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಕೋರಿದ ಅವರು, ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಅಲ್ಲದೆ, ದಸರಾ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಸಂಘಟಕರು ಹಾಗೂ ಬನ್ನು ಬಿರಾದರಿ ಪದಾಧಿಕಾರಿಗಳನ್ನು ಅಭಿನಂದಿಸಿದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ