Breaking News

ವಿಜಯಪುರದಲ್ಲಿ ದೋಖಾ ದುರಂತ: ಭೂತನಾಳ ಕೆರೆಯಲ್ಲಿ ತಾಯಿ ಹಾಗೂ 5 ಮಕ್ಕಳ ಮೃತದೇಹ ಪತ್ತೆ

ವಿಜಯಪುರ: ನಗರದ ಹೊರವಲಯದ ಪ್ರಸಿದ್ಧ ಭೂತನಾಳ ಕೆರೆಯಲ್ಲಿ (Bhutanal Tank) ತಾಯಿ ಹಾಗೂ ಆಕೆಯ ಐದು ಜನ ಅಪ್ರಾಪ್ತ ಮಕ್ಕಳ ಶವಗಳು ಬುಧವಾರ ಪತ್ತೆಯಾಗಿದ್ದು, ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.

ಮೃತರನ್ನು ತೋರವಿ ಶಾಂತಿನಗರದ ನಿವಾಸಿ ಶೋಭಾ ಮಲ್ಲಿಕಾರ್ಜುನ ಜಾಲಗೇರಿ (35) ಹಾಗೂ ಆಕೆಯ ಮಕ್ಕಳಾದ ವಿದ್ಯಾ (15), ಸುವರ್ಣ (13), ತಿಪ್ಪರಾಯ (12), ಸಾನಿಕಾ (10) ಮತ್ತು ವಿಕಾಸ್ (6) ಎಂದು ಗುರುತಿಸಲಾಗಿದೆ.

ಮಲ್ಲಿಕಾರ್ಜುನ ಭೀಮಸಿ ಜಾಲಗೇರಿ ಎಂಬುವವರು ತಮ್ಮ ಪತ್ನಿ ಶೋಭಾ ಹಾಗೂ ಐದೂ ಮಕ್ಕಳು ಮನೆಯಿಂದ ಹೊರಟು ಹೋಗಿ ಕಾಣೆಯಾಗಿದ್ದಾರೆ ಎಂದು ಸೋಮವಾರ ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಬುಧವಾರ ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಾಳ ಕೆರೆಯ ದಂಡೆಯ ಬಳಿ ಮೃತದೇಹಗಳು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಆರೂ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಬಿ.ಎಲ್.ಡಿ.ಇ (BLDE) ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ವಿದೇಶಿಗರ ಮೇಲಿನ ಸಣ್ಣಪುಟ್ಟ ಕ್ರಿಮಿನಲ್ ಕೇಸ್​​ಗಳು ವಾಪಸಾತಿ: 365 ವಿದೇಶಿಯರ ಡಿಪೋರ್ಟ್‌ಗೆ ಪ್ರಾಸಿಕ್ಯೂಷನ್ ಇಲಾಖೆ ಚಾಲನೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಲಕ್ಷ್ಮಣ್ ನಿಂಬರಗಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆಯಾದರೂ, ಇದು ಆತ್ಮಹತ್ಯೆಯೋ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಕುರಿತು ಎಲ್ಲಾ ಕೋನಗಳಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *