ನವದೆಹಲಿ: ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿರುವ ನೇಪಾಳದಲ್ಲಿ ಸಿಲುಕಿದ್ದ 54 ಕರ್ನಾಟಕದ ನಿವಾಸಿಗಳು ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಶಿವಕುಮಾರ್, ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾ ಕಾರ್ಯಾಚರಣೆಯ ಪ್ರಗತಿಯನ್ನು ಪರಿಶೀಲಿಸಿರುವುದಾಗಿ ಹೇಳಿದ್ದಾರೆ. ಕರ್ನಾಟಕ ಭವನದ ನವದೆಹಲಿಯ ನಿವಾಸಿ ಆಯುಕ್ತರೊಂದಿಗೆ ಮಾತನಾಡಿ ರಕ್ಷಣಾ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದಿದ್ದು, ಸಿಲುಕಿರುವ ಯಾತ್ರಿಕರು ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
54 ಕನ್ನಡಿಗರು ಈಗಾಗಲೇ ಸುರಕ್ಷಿತವಾಗಿ ತವರಿಗೆ ಮರಳಿರುವುದು ಸಂತಸದ ವಿಚಾರ ಎಂದು ಹೇಳಿರುವ ಶಿವಕುಮಾರ್, ಇನ್ನೂ ನೇಪಾಳದಲ್ಲಿ ಸಿಲುಕಿರುವವರ ಕುಟುಂಬಸ್ಥರು ಆತಂಕಪಡಬೇಕಿಲ್ಲ ಎಂದು ಭರವಸೆ ನೀಡಿದ್ದಾರೆ. ಉಳಿದವರನ್ನೂ ಸುರಕ್ಷಿತವಾಗಿ ಮನೆಗೆ ಕರೆತರಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮುಂದುವರಿಸಿದೆ ಎಂದು ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಎಕ್ಸ್ ಪೋಸ್ಟ್
ನೇಪಾಳದಲ್ಲಿ ಸಂಭವಿಸಿರುವ ಹಠಾತ್ ಪ್ರವಾಹ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾ ಕಾರ್ಯಾಚರಣೆಯ ಪ್ರಗತಿ ಕುರಿತು ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರಿಂದ ಸಮಗ್ರ ಮಾಹಿತಿ ಪಡೆಯಲಾಯಿತು.
ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷಿತ ವಾಪಸಾತಿಗೆ ನಮ್ಮ ಸರ್ಕಾರ ಸಕಲ ಕ್ರಮ ಕೈಗೊಂಡಿದೆ. ಈಗಾಗಲೇ 54… pic.twitter.com/VUFqYmoh3F
— DK Shivakumar (@DKShivakumar) August 30, 2026
ನೇಪಾಳದಲ್ಲಿ ಸಾವಿನ ಸಂಖ್ಯೆ 788ಕ್ಕೆ ಏರಿಕೆ
ಆಗಸ್ಟ್ 26ರಂದು ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹ ಮತ್ತು ಭೂಕುಸಿತಗಳು ನೇಪಾಳ ಹಾಗೂ ಟಿಬೆಟ್ನ ಹಲವು ಭಾಗಗಳಲ್ಲಿ ಗಂಭೀರ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿವೆ. ವಿಶೇಷವಾಗಿ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿ ವ್ಯವಸ್ಥೆಗಳ ಸುತ್ತಮುತ್ತ ಪರಿಸ್ಥಿತಿ ತೀವ್ರಗೊಂಡಿದ್ದು, ಪ್ರತಿಕೂಲ ಹವಾಮಾನ ಮತ್ತು ದುರ್ಗಮ ಭೂಪ್ರದೇಶದ ನಡುವೆಯೂ ರಕ್ಷಣಾ, ಶೋಧ ಮತ್ತು ಮೃತದೇಹಗಳ ಗುರುತು ಪತ್ತೆ ಕಾರ್ಯಾಚರಣೆಗಳು ಮುಂದುವರಿದಿವೆ.
ಇದನ್ನೂ ಓದಿ: ನೇಪಾಳ ದುರಂತಕ್ಕೂ ಮುನ್ನ ಸಿಕ್ಕಿತ್ತಾ ದೈವಿಕ ಮುನ್ಸೂಚನೆ? ಪಲಾಂಚೋಕ್ ಭಗವತಿ ವಿಗ್ರಹ ಬೆವತ 2 ದಿನದಲ್ಲೇ ಪ್ರಳಯ
ನೇಪಾಳ ಪೊಲೀಸರ ಭಾನುವಾರ ಮಧ್ಯಾಹ್ನ 3 ಗಂಟೆಯವರೆಗಿನ ಮಾಹಿತಿಯ ಪ್ರಕಾರ, ಪ್ರವಾಹದಲ್ಲಿ ಒಟ್ಟು 788 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿತ್ವಾನ್ ಜಿಲ್ಲೆಯಲ್ಲಿ ಅತಿ ಹೆಚ್ಚು 264 ಸಾವುಗಳು ವರದಿಯಾಗಿದ್ದು, ನವಲ್ಪರಾಸಿ ಪೂರ್ವದಲ್ಲಿ 197, ನವಲ್ಪರಾಸಿ ಪಶ್ಚಿಮದಲ್ಲಿ 120, ಗೋರಖಾದಲ್ಲಿ 61, ನುವಾಕೋಟ್ನಲ್ಲಿ 52, ಧಾದಿಂಗ್ನಲ್ಲಿ 50, ತನಹುನ್ನಲ್ಲಿ 37 ಮತ್ತು ರಾಸುವಾದಲ್ಲಿ 13 ಸಾವುಗಳು ದಾಖಲಾಗಿವೆ.
ಇದೇ ವೇಳೆ, ಹಲವು ಜಿಲ್ಲೆಗಳ ನದಿಗಳು ಮತ್ತು ಹಳ್ಳಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ನುವಾಕೋಟ್ ಮತ್ತು ರಾಸುವಾ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹದ ಅಪಾಯ ಹೆಚ್ಚಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದು, ರಕ್ಷಣಾ ಸಿಬ್ಬಂದಿ ನಿರಂತರವಾಗಿ ಪರಿಸ್ಥಿತಿಯ ಮೇಲೆ ನಿಗಾ ವಹಿಸುತ್ತಿದ್ದಾರೆ.

