ಬಿಲಾಸ್‌ಪುರ್: ಮದುವೆಯಾಗಿದೆ ಎಂಬ ಒಂದೇ ಕಾರಣಕ್ಕೆ ಮೃತ ಉದ್ಯೋಗಿಯ ಮಗಳಿಗೆ ಅನುಕಂಪದ ಆಧಾರದ ಮೇಲೆ (Compassionate Appointment) ಉದ್ಯೋಗ ನಿರಾಕರಿಸುವುದು ಸಂವಿಧಾನ ವಿರೋಧಿ ಮತ್ತು ಕಾನೂನುಬಾಹಿರ ಎಂದು ಛತ್ತೀಸ್‌ಗಢ ಹೈಕೋರ್ಟ್ ಪ್ರಮುಖ ತೀರ್ಪು ನೀಡಿದೆ.
ಬ್ಯಾಂಕ್‌ನ ನಿಯಮಾವಳಿಯಲ್ಲಿ ಮದುವೆಯಾದ ಮಗ ಮತ್ತು ಮಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲದಿದ್ದಾಗ, ಮಗಳಿಗೆ ಉದ್ಯೋಗ ನಿರಾಕರಿಸುವುದು ಸಂವಿಧಾನದ ವಿಧಿ ೧೪ ಮತ್ತು ೧೫ ರ ಉಲ್ಲಂಘನೆಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಹಾಗೂ ನ್ಯಾಯಮೂರ್ತಿ ರವೀಂದ್ರ ಕುಮಾರ್ ಅಗರ್ವಾಲ್ ಅವರಿದ್ದ ಪೀಠ ಹೇಳಿದೆ.
ಇದನ್ನೂ ಓದಿ: ಕಿವಿ ತುರಿಕೆಗೆ ಆನೆಯ ‘ದೇಸಿ ಟ್ರೀಟ್‌ಮೆಂಟ್’: ಸಣ್ಣ ಕಡ್ಡಿಯನ್ನೇ ಬಳಸಿಕೊಂಡು ಆರಾಮ ಕಂಡ ಆನೆಯ ವಿಡಿಯೋ ವೈರಲ್
ಮದುವೆಯಾದ ಮಗನಿಗೆ ಅವಕಾಶವಿದ್ದಾಗ ಮಗಳಿಗೇಕಿಲ್ಲ?:
“ವಿವಾಹವಾದ ಮಗನನ್ನು ಕುಟುಂಬದ ಶ್ರೇಯೋಭಿವೃದ್ಧಿಗೆ ಅವಲಂಬಿತ ಎಂದು ಪರಿಗಣಿಸಿ ಉದ್ಯೋಗ ನೀಡಬಹುದಾದರೆ, ಅದೇ ನಿಯಮ ಹಾಗೂ ಮಾನದಂಡ ಮಗಳಿಗೂ ಅನ್ವಯಿಸಬೇಕು” ಎಂದು ಪೀಠ ಸ್ಪಷ್ಟಪಡಿಸಿದೆ. ಬಿಲಾಸ್‌ಪುರದ ಶೀನಾ ಡೇವಿಡ್ (೩೩) ಮತ್ತು ರಾಯ್‌ಪುರದ ಅಂಕಿತಾ ಮಿಶ್ರಾ (೩೨) ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಈ ಹಿಂದೆ ಇವರ ಅರ್ಜಿಯನ್ನು ವಜಾಗೊಳಿಸಿದ್ದ ಸಿಂಗಲ್ ಬೆಂಚ್ ಆದೇಶವನ್ನು ರದ್ದುಗೊಳಿಸಲಾಗಿದೆ.
ಅರ್ಜಿದಾರರ ತಂದೆಯಂದಿರಾದ ನೋಯೆಲ್ ಶೈಲೇಂದ್ರ ಕುಮಾರ್ ಜೋನ್ಸ್ ಹಾಗೂ ಮಂದನ್ ಕುಮಾರ್ ಪಾಂಡಾ ಅವರು ಛತ್ತೀಸ್‌ಗಢ ರಾಜ್ಯ ಗ್ರಾಮೀಣ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಮೃತಪಟ್ಟಿದ್ದರು. ಇದೀಗ 90 ದಿನಗಳ ಒಳಗಾಗಿ ಇಬ್ಬರೂ ಮಹಿಳೆಯರ ವಿದ್ಯಾರ್ಹತೆಗೆ ತಕ್ಕಂತೆ ಸೂಕ್ತ ಹುದ್ದೆ ನೀಡುವಂತೆ ಬ್ಯಾಂಕ್‌ಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಮದುವೆಯಾದ ಮಗ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಾನೆ, ಮಗಳು ಗಂಡನ ಮನೆಗೆ ಹೋಗುತ್ತಾಳೆ ಎಂಬುದು ಕೇವಲ ಸಾಮಾಜಿಕ ಊಹೆಯಷ್ಟೇ ಹೊರತು ಕಾನೂನಿನ ಸಮರ್ಥನೆಯಲ್ಲ. ನಿಜವಾದ ‘ಆರ್ಥಿಕ ಅವಲಂಬನೆ’ಯನ್ನು (Actual Dependency) ಪರಿಶೀಲಿಸಬೇಕೇ ಹೊರತು ವಿವಾಹದ ಸ್ಥಿತಿಯನ್ನಲ್ಲ ಎಂದು ನ್ಯಾಯಾಲಯ ಹೇಳಿದೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

