Breaking News

ಸಾರ್ವಜನಿಕ ರಂಗಕ್ಕೆ ಮಹಿಳೆಯರು ಬರಬಾರದು, ಮನೆಯಲ್ಲೇ ಇರಬೇಕು: ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿಕೆ ವಿವಾದ

ಕೊಚ್ಚಿ: ಮಹಿಳೆಯರು ಸಾರ್ವಜನಿಕ ರಂಗಕ್ಕೆ ಬಾರದೆ ಮನೆಗಳಲ್ಲೇ ಇರಬೇಕು ಹಾಗೂ ಅವರ ಗೌರವವನ್ನು ಕಾಪಾಡಲು ಇಸ್ಲಾಂನಲ್ಲಿ ಪರ್ದಾ (ಹಿಜಾಬ್/ಪರ್ದಾ) ಪದ್ಧತಿಯನ್ನು ಸೂಚಿಸಲಾಗಿದೆ ಎಂದು ಸುನ್ನಿ ಪಂಥದ ಪ್ರಮುಖ ಇಸ್ಲಾಮಿಕ್ ವಿದ್ವಾಂಸ ಹಾಗೂ ಇಂಡಿಯಾದ ೧೦ನೇ ಗ್ರಾಂಡ್ ಮುಫ್ತಿ ಎಂದೇ ಪರಿಚಿತರಾಗಿರುವ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ (Kanthapuram A.P. Aboobacker Musliyar) ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಕೊಚ್ಚಿಯಲ್ಲಿ ನಡೆದ ಇಸ್ಲಾಮಿಕ್ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, ಮಹಿಳೆಯರು ಮನೆಯಲ್ಲೇ ಇರಬೇಕೆಂದು ಪವಿತ್ರ ಕುರಾನ್ ಹೇಳುತ್ತದೆ ಎಂದು ಪ್ರತಿಪಾದಿಸಿದರು.

“ಮಹಿಳೆಯರು ತಮ್ಮ ಮನೆಗಳ ಗಡಿಯೊಳಗೆ ಇರಬೇಕು, ಸಾರ್ವಜನಿಕ ಕ್ಷೇತ್ರಕ್ಕೆ ಬರಬಾರದು. ಪವಿತ್ರ ಕುರಾನ್ ಇದನ್ನೇ ಹೇಳುತ್ತದೆ. ಇದು ಮಹಿಳೆಯರನ್ನು ಕೀಳಾಗಿ ಕಾಣಲು ಅಲ್ಲ, ಬದಲಿಗೆ ಅವರಿಗೆ ಗೌರವ ನೀಡಲು ಹಾಗೂ ರಕ್ಷಣೆ ನೀಡಲು ಮಾಡಿರುವ ನಿಯಮ” ಎಂದು ಹೇಳಿದರು. ಮಹಿಳೆಯರನ್ನು ಸಾರ್ವಜನಿಕ ರಂಗಕ್ಕೆ ತರುವುದರಿಂದ ಮಹಾ ವಿನಾಶ ಉಂಟಾಗುತ್ತದೆ. ಆದ್ದರಿಂದಲೇ ಇಸ್ಲಾಂನಲ್ಲಿ ಪರ್ದಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಪ್ರತಿಪಾದಿಸಿದರು.

ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಅವರು ಚಿನ್ನದ ಆಭರಣ ಮತ್ತು ಬೀಸುವ ಕಲ್ಲಿನ (Stone Grinder) ಉದಾಹರಣೆ ನೀಡಿದರು. “ಚಿನ್ನದ ಒಡವೆಯನ್ನು ಪೆಟ್ಟಿಗೆಯಲ್ಲಿ, ಬಟ್ಟೆಯಲ್ಲಿ ಸುತ್ತಿ ಬೀಗ ಹಾಕಿ ಸುರಕ್ಷಿತವಾಗಿಡಲಾಗುತ್ತದೆ. ಅದೇ ಬೀಸುವ ಕಲ್ಲನ್ನು ರಸ್ತೆ ಬದಿಯಲ್ಲಿ ಇಡಲಾಗುತ್ತದೆ, ಜನರು ಅದನ್ನು ದಾಟಿ ಹೋಗುತ್ತಾರೆ. ಚಿನ್ನದ ಹಾರವನ್ನು ರಸ್ತೆ ಬದಿಯಲ್ಲಿ ಇಟ್ಟರೆ ಅದರ ಸೌಂದರ್ಯ ಮತ್ತು ಮೌಲ್ಯ ನಾಶವಾಗುತ್ತದೆ. ಅಂತೆಯೇ ಮಹಿಳೆಯರ ಗೌರವ ಉಳಿಯಬೇಕಾದರೆ ಅವರು ಸುರಕ್ಷಿತವಾಗಿ ಮನೆ ಒಳಗಿರಬೇಕು” ಎಂದರು.

ಇದನ್ನೂ ಓದಿ: ಕಿವಿ ತುರಿಕೆಗೆ ಆನೆಯ ‘ದೇಸಿ ಟ್ರೀಟ್‌ಮೆಂಟ್’: ಸಣ್ಣ ಕಡ್ಡಿಯನ್ನೇ ಬಳಸಿಕೊಂಡು ಆರಾಮ ಕಂಡ ಆನೆಯ ವಿಡಿಯೋ ವೈರಲ್

ಇತ್ತೀಚೆಗೆ ‘ಸಮಸ್ತ ಕೇರಳ ಜಮ್ಮಿಯತುಲ್ ಉಲಮಾ’ ಸಮಿತಿಯು ಮಹಿಳೆಯರು ಪುರುಷರೊಂದಿಗೆ ವೇದಿಕೆ ಹಂಚಿಕೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಿರುವುದನ್ನು ಅವರು ಸಮರ್ಥಿಸಿಕೊಂಡರು. ಕಳೆದ ೧೦೦ ವರ್ಷಗಳಿಂದ ಧಾರ್ಮಿಕ ಪಂಡಿತರು ಇದನ್ನೇ ಬೋಧಿಸುತ್ತಿದ್ದಾರೆ ಎಂದರು. ಇಸ್ಲಾಂ ಧರ್ಮವು ಪ್ರೇರಿತವಾಗಿ ಮಹಿಳೆಯರಿಗೆ ಪ್ರತ್ಯೇಕ ಸ್ಥಾನಮಾನ ನೀಡಿದೆ, ಹೆಣ್ಣು ಭ್ರೂಣ ಹತ್ಯೆಯನ್ನು ನಿಷೇಧಿಸಿದೆ ಮತ್ತು ಆಸ್ತಿ ಹಕ್ಕನ್ನು ನೀಡಿದೆ ಎಂದು ಸ್ಮರಿಸಿದ ಅವರು, ಸಾರ್ವಜನಿಕ ರಂಗದ ಮೇಲಿನ ನಿರ್ಬಂಧಗಳನ್ನು ಗೌರವದ ರೂಪದಲ್ಲಿ ನೋಡಬೇಕು ಎಂದರು.

“ನಾವು ಧರ್ಮವನ್ನು ಅಧ್ಯಯನ ಮಾಡಿದ್ದೇವೆ, ಹೀಗಾಗಿ ಇದನ್ನು ಹೇಳುವುದು ನಮ್ಮ ಕರ್ತವ್ಯ. ಇದನ್ನು ನಾವು ಹೇಳುತ್ತಲೇ ಇರುತ್ತೇವೆ, ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ” ಎಂದು ಕಡಾಖಂಡಿತವಾಗಿ ಹೇಳಿದರು. ಈ ಹೇಳಿಕೆಗೆ ಕೇರಳದ ಹಲವು ಮಹಿಳಾ ರಾಜಕೀಯ ನಾಯಕಿಯರು ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *