ದೆಹಲಿ: ಕರಾವಳಿ ಭಾಗದ ಜನತೆಯ ದಶಕಗಳ ಬೇಡಿಕೆಯಾಗಿದ್ದ ಮಂಗಳೂರು ರೈಲ್ವೆ ಜಾಲವನ್ನು ನೈಋತ್ಯ ರೈಲ್ವೆ (SWR) ವಲಯದ ಮೈಸೂರು ವಿಭಾಗಕ್ಕೆ ವಿಲೀನಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಈ ಮಹತ್ವದ ನಿರ್ಧಾರಕ್ಕಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಖುದ್ದು ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ರೈಲ್ವೆ ಸಚಿವರ ಭೇಟಿಯ ಬಳಿಕ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ಈ ನಿರ್ಧಾರದಿಂದ ಕರಾವಳಿ ಭಾಗಕ್ಕೆ ಆಗುವ ಪ್ರಮುಖ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ ಮಂಗಳೂರು ರೈಲ್ವೆ ಜಾಲವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವುದರಿಂದ ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯ ಮತ್ತು ನಿರ್ವಹಣೆ ಇನ್ನಷ್ಟು ಸಮರ್ಥವಾಗಿ ನಡೆಯಲಿದೆ.
ಕರ್ನಾಟಕದ ಇತರ ಭಾಗಗಳ ರೈಲ್ವೆ ಜಾಲದೊಂದಿಗೆ ಮಂಗಳೂರಿನ ರೈಲು ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ. ಈ ಆಡಳಿತಾತ್ಮಕ ಬದಲಾವಣೆಯಿಂದಾಗಿ ಕರಾವಳಿ ಭಾಗದ ರೈಲ್ವೆ ಯೋಜನೆಗಳಿಗೆ, ಪ್ರಯಾಣಿಕರ ಸೌಲಭ್ಯಗಳಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ.
ಇದನ್ನೂ ಓದಿ: ಉಡುಪಿಯಲ್ಲಿ ದಾರುಣ ಘಟನೆ: ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಮಗ
ಇದೇ ವೇಳೆ ಸಂಸದರ ಭೇಟಿಗೆ ಧನಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಕರಾವಳಿ ಕರ್ನಾಟಕದ ರೈಲ್ವೆ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

