Breaking News

ಮಂಗಳೂರು: ಯತೀಶ್ ಪೆರುವಾಯಿ ಗಡಿಪಾರು ಪ್ರಸ್ತಾವನೆ ಸದ್ಯಕ್ಕೆ ರದ್ದು – ಎಸ್ಪಿ ಡಾ. ಅರುಣ್ ಕೆ. ಐಪಿಎಸ್ ಆದೇಶ

ಮಂಗಳೂರು: ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಯತೀಶ್ ಎ. (ಯತೀಶ್ ಪೆರುವಾಯಿ) ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯಡಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಸಲ್ಲಿಕೆಯಾಗಿದ್ದ ಪ್ರಸ್ತಾವನೆಯನ್ನು ಸದ್ಯಕ್ಕೆ ಕೈಬಿಟ್ಟು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಡಾ. ಅರುಣ್ ಕೆ. ಐಪಿಎಸ್ ಆದೇಶ ಹೊರಡಿಸಿದ್ದಾರೆ.

ವಿಟ್ಲ ಪೊಲೀಸ್ ಠಾಣಾಧಿಕಾರಿಗಳು ಯತೀಶ್ ಪೆರುವಾಯಿ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ ೫೫(ಎ) ಮತ್ತು ೫೫(ಬಿ) ಅಡಿಯಲ್ಲಿ ಹೊರ ಜಿಲ್ಲೆಗೆ ಗಡಿಪಾರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕುರಿತು ಶೋಕಾಸ್ ನೋಟೀಸ್ ಜಾರಿಯಾಗಿದ್ದು, ಜುಲೈ15 , 2026 ರಂದು ಎಸ್ಪಿ ನ್ಯಾಯಾಲಯದಲ್ಲಿ ವಿಚಾರಣೆ ನಿಗದಿಯಾಗಿತ್ತು.ವಿಚಾರಣೆ ವೇಳೆ ಯತೀಶ್ ಅವರು ಯಾವುದೇ ವಕೀಲರನ್ನು ನೇಮಿಸಿಕೊಳ್ಳದೆ ತಾವೇ ಸ್ವತಃ ವಾದ ಮಂಡಿಸಲು ‘ಪಾರ್ಟಿ-ಇನ್-ಪರ್ಸನ್’ ಆಗಿ ಅನುಮತಿ ಕೋರಿದ್ದರು. ನ್ಯಾಯಾಲಯವು ಇದಕ್ಕೆ ಸಮ್ಮತಿ ನೀಡಿತ್ತು.

ವಿಚಾರಣೆ ವೇಳೆ ಪೊಲೀಸರ ಪ್ರಸ್ತಾವನೆ ಹಾಗೂ ಯತೀಶ್ ಅವರ ಆಕ್ಷೇಪಣೆಗಳನ್ನು ಪರಿಶೀಲಿಸಲಾಯಿತು. ಯತೀಶ್ ಅವರು ಕಲಂ ೫೫(ಎ) ಅಡಿಯಲ್ಲಿ ಬರುವ ವ್ಯಕ್ತಿಯಾಗಿದ್ದರೂ, ಕಳೆದ ಒಂದು ವರ್ಷದಿಂದ ಯಾವುದೇ ರೀತಿಯ ಅನಧಿಕೃತ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲದಿರುವುದು ಕಂಡುಬಂದಿದೆ.

ಇದನ್ನೂ ಓದಿ: ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಪುತ್ತೂರಿನ ನೆಲ್ಲಿಕಟ್ಟೆ ಅಂಬಿಕಾ ಪಿಯು ಕಾಲೇಜು ವಿದ್ಯಾರ್ಥಿಗಳು ಆಯ್ಕೆ

ಕಳೆದ ಒಂದು ವರ್ಷದಲ್ಲಿ ಯಾವುದೇ ರೀತಿಯ ತುರ್ತು ಎಚ್ಚರಿಕೆ ಅಥವಾ ಶಾಂತಿಭಂಗ ಉಂಟುಮಾಡುವ ಕೃತ್ಯಗಳಲ್ಲಿ ಅವರು ಭಾಗಿಯಾಗಿಲ್ಲ ಎಂದು ದಾಖಲೆಗಳು ಸ್ಪಷ್ಟಪಡಿಸಿವೆ. ಅವರ ಈ ಇತ್ತೀಚಿನ ಉತ್ತಮ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ನ್ಯಾಯಾಲಯವು ಗಡಿಪಾರು ಪ್ರಕ್ರಿಯೆಯನ್ನು ಸದ್ಯಕ್ಕೆ ಕೈಬಿಟ್ಟು ಆಗಸ್ಟ್ ೨೬, ೨೦೨೬ ರಂದು ಆದೇಶ ಪ್ರಕಟಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಯಾವುದೇ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದರೆ ಹೊಸದಾಗಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *