ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಪದವು ಬಳಿ ಇರುವ ಭಗವಾನ್ ಬಬ್ಬುಸ್ವಾಮಿ ದೈವಸ್ಥಾನದ ಆವರಣದ ರಸ್ತೆ ಡಿವೈಡರ್ನಲ್ಲಿರುವ ಪುರಾತನ ಸಂಪಿಗೆ ಮರವನ್ನು ತೆರವುಗೊಳಿಸುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಪ್ರಸ್ತಾವನೆಗೆ ಕಾರ್ಣಿಕ ದೈವ ರಾಹುಗುಳಿಗ ಉಗ್ರ ಸ್ವರೂಪ ತಾಳಿ ಎಚ್ಚರಿಕೆ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಈ ಕುರಿತು ದೈವಸ್ಥಾನದ ಆಡಳಿತ ಮಂಡಳಿಯು ಸಂಪೂರ್ಣ ಮಾಹಿತಿ ನೀಡಿದೆ.
ಈ ಸಂಪಿಗೆ ಮರವು ಭಗವಾನ್ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಸೇರಿದ ಅತ್ಯಂತ ಪುರಾತನ ಮರವಾಗಿದೆ. ಹಳೆಯ ಕಾಲದಲ್ಲಿ ಇದೇ ಮರದ ಕಟ್ಟೆಯಲ್ಲಿ ಗ್ರಾಮದ ಮುಖ್ಯ ತೀರ್ಮಾನಗಳು ಹಾಗೂ ಧಾರ್ಮಿಕ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿತ್ತು. ಕ್ರಮೇಣ ಈ ಮರಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಲು ಪ್ರಾರಂಭಿಸಲಾಯಿತು.
ಹಿಂದೆ ರಸ್ತೆ ಅಗಲೀಕರಣ ಕೈಗೊಂಡಾಗಲೂ ಈ ಮರವನ್ನು ಮುಟ್ಟದೇ ಹಾಗೆಯೇ ಬಿಟ್ಟು ರಸ್ತೆ ನಿರ್ಮಿಸಲಾಗಿತ್ತು. ಆದರೆ, ತದನಂತರ ಆ ರಸ್ತೆ ಭಾಗದಲ್ಲಿ ನಿರಂತರ ಸರಣಿ ಅಪಘಾತಗಳು ಸಂಭವಿಸುತ್ತಿದ್ದವು. ಈ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಂಪಿಗೆ ಮರದಲ್ಲಿದ್ದ ರಾಹುಗುಳಿಗ ದೈವಕ್ಕೆ ದೈವಸ್ಥಾನದ ಆವರಣದಲ್ಲಿ ನೂತನ ಗುಡಿ ನಿರ್ಮಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಅಲ್ಲಿಂದ ರಸ್ತೆ ಅಪಘಾತಗಳು ಸಂಪೂರ್ಣವಾಗಿ ನಿಂತುಹೋದವು. ಆದಾಗ್ಯೂ, ದೈವದ ದೃಷ್ಟಿ ಈ ಪುರಾತನ ಸಂಪಿಗೆ ಮರದ ಮೇಲೆಯೇ ಇತ್ತು.
ಇದನ್ನೂ ಓದಿ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಬಿಡುಗಡೆ: ಮಂಚಿ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ ವಿಜಯಲಕ್ಷ್ಮಿ, ವಿಟ್ಲ ಪಿಎಂಶ್ರೀ ಪ್ರೌಢಶಾಲೆಯ ವಿದ್ಯಾಶಂಕರ್ ಅವರಿಗೆ ಒಲಿದ ಪ್ರಶಸ್ತಿ
ಈ ಹಿಂದೆ ಸ್ಥಳೀಯ ಕಾರ್ಪೊರೇಟರ್ ಒಬ್ಬರು ಈ ಸಂಪಿಗೆ ಮರವನ್ನು ತೆರವುಗೊಳಿಸಲು ಮುಂದಾಗಿದ್ದಾಗ, ಮರದ ಬಳಿ ಬೃಹತ್ ನಾಗರಹಾವು ಪ್ರತ್ಯಕ್ಷವಾಗಿ ಅವರು ಭೀತಿಯಿಂದ ಕಾಲ್ತೆಗೆದು ವಾಪಸ್ ಹೋಗಿದ್ದರು. ಇದೀಗ ಅಂಡರ್ ಪಾಸ್ ಯೋಜನೆಗಾಗಿ NHAI ಅಧಿಕಾರಿಗಳು ಮತ್ತೆ ಮರ ತೆರವುಗೊಳಿಸಲು ಬಂದಿದ್ದಾರೆ. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈ ಸೂಕ್ಷ್ಮ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ, ದೈವದ ಕಾರ್ಣಿಕವನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ಮರ ಉಳಿಸಬೇಕು ಎಂದು ಆಡಳಿತ ಮಂಡಳಿ ಆಗ್ರಹಿಸಿದೆ.

