ತ್ರಿಶೂರ್ : ಕೇರಳದ ತ್ರಿಶೂರ್ ಜಿಲ್ಲೆಯ ಕೈಪಮಂಗಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ತಮಿಳುನಾಡಿನ ಎಂಟು ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಶುಕ್ರವಾರ (ಸೆಪ್ಟೆಂಬರ್ 4) ರಾತ್ರಿ ಸುಮಾರು 11.40 ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದ ದೃಶ್ಯಗಳು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮೃತಪಟ್ಟವರೆಲ್ಲರೂ ತಮಿಳುನಾಡಿನ ದಿಂಡಿಗಲ್ನಲ್ಲಿರುವ ಪಿಎಸ್ಎಂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಗುರುವಾರದಿಂದ ಕೊಡುಂಗಲ್ಲೂರು ಕಡೆಗೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಿದ್ದ ಕಾರು, ಕೈಪಮಂಗಲಂನಲ್ಲಿ ನಿರ್ಮಾಣ ಹಂತದಲ್ಲಿದ್ದ ರಸ್ತೆ ಡೈವರ್ಷನ್ ಬಳಿ ಸಾಲಾಗಿ ನಿಂತಿದ್ದ ಲಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಘಟನೆ ನಡೆದ ತಕ್ಷಣವೇ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕಾರು ತೀವ್ರವಾಗಿ ಜಜ್ಜಲ್ಪಟ್ಟಿದ್ದರಿಂದ ಮೆಟಲ್ ಕಟರ್ ಬಳಸಿ ಕಾರಿನ ಭಾಗಗಳನ್ನು ಕತ್ತರಿಸಿ ಮೃತದೇಹಗಳನ್ನು ಹೊರತೆಗೆಯಲಾಯಿತು.
ಇದನ್ನೂ ಓದಿ: ಸೀತಾಪುರದಲ್ಲಿ ಅಪರೂಪದ ಪ್ರಸವ: ಒಂದೇ ಬಾರಿಗೆ 4 ಮಕ್ಕಳಿಗೆ ಜನ್ಮ ನೀಡಿದ ತಾಯಿ
ಪ್ರಸ್ತುತ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತ್ರಿಶೂರ್ ಮೆಡಿಕಲ್ ಕಾಲೇಜಿನ ಶವಾಗಾರಕ್ಕೆ ರವಾನಿಸಲಾಗಿದ್ದು, ಕೈಪಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

