Breaking News

ಹಾಳಾದ ರಸ್ತೆಯಲ್ಲಿ ಸಿಲುಕಿದ ಆಂಬ್ಯುಲೆನ್ಸ್: ಸೂಕ್ತ ಚಿಕಿತ್ಸೆ ಸಿಗದೆ ನವಜಾತ ಶಿಶು ದಾರುಣ ಸಾವು

ಆಗ್ರಾ: ದುರಸ್ಥಿತಿಗೊಳ್ಳದ ರಸ್ತೆಯಲ್ಲಿ ಆಂಬ್ಯುಲೆನ್ಸ್‌ ಸುಮಾರು ಎರಡು ಗಂಟೆಗಳ ಕಾಲ ಸಿಲುಕಿಕೊಂಡ ಪರಿಣಾಮ, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಲಾಗದೆ ನವಜಾತ ಹೆಣ್ಣು ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಬಾಹ್ ತಾಲೂಕಿನ ಗಢವಾರ್ ಗ್ರಾಮದಲ್ಲಿ ನಡೆದಿದೆ. ಸಂತ್ರಸ್ತ ಕುಟುಂಬಸ್ಥರ ದೂರಿನನ್ವಯ ಘಟನೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಸೆಪ್ಟೆಂಬರ್ 2 ರಂದು ಗಢವಾರ್ ಗ್ರಾಮದ ಪ್ರದೀಪ್ ಸಿಂಗ್ ಅವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಸರ್ಕಾರಿ ಆಂಬ್ಯುಲೆನ್ಸ್‌ ಕರೆಸಿದ್ದರು. ಆದರೆ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ತೀವ್ರವಾಗಿ ಹಾಳಾಗಿದ್ದ ರಸ್ತೆಯಲ್ಲಿ ಆಂಬ್ಯುಲೆನ್ಸ್‌ ಸಿಲುಕಿಕೊಂಡಿತು. ರಸ್ತೆಯಲ್ಲಿ ಸಿಲುಕಿದ್ದ ಆಂಬ್ಯುಲೆನ್ಸ್ ಅನ್ನು ಹೊರತೆಗೆಯಲು ಗ್ರಾಮಸ್ಥರು ಅದಕ್ಕೆ ಟ್ರಾಕ್ಟರ್ ಕಟ್ಟಿ ಎಳೆಯಬೇಕಾಯಿತು. ಇದರಿಂದಾಗಿ ಆಸ್ಪತ್ರೆ ತಲುಪುವುದು ಸುಮಾರು ಎರಡು ಗಂಟೆ ತಡವಾಯಿತು.

ಕೊನೆಗೂ ಗರ್ಭಿಣಿಯನ್ನು ಆಸ್ಪತ್ರೆಗೆ ತಲುಪಿಸಲಾಯಿತಾದರೂ, ಅಷ್ಟರಲ್ಲಾಗಲೇ ನವಜಾತ ಶಿಶು ಉಸಿರಾಟ ನಿಲ್ಲಿಸಿ ಮೃತಪಟ್ಟಿತ್ತು. ಮಗುವನ್ನು ಕಳೆದುಕೊಂಡು ಕಂಗಾಲಾದ ತಂದೆ ಪ್ರದೀಪ್ ಕುಮಾರ್, ರಸ್ತೆ ದುರಸ್ತಿ ಮತ್ತು ನಿರ್ವಹಣೆಗೆ ಜವಾಬ್ದಾರರಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಉಪ ವಿಭಾಗಾಧಿಕಾರಿ (SDM) ವಿನೋದ್ ಕುಮಾರ್ ಮಾತನಾಡಿ, “ಸೆಪ್ಟೆಂಬರ್ ೫ ರಂದು ನಡೆದ ತಹಸೀಲ್ ದಿವಸದಂದು ದೂರು ಸ್ವೀಕರಿಸಲಾಗಿದ್ದು, ಇದನ್ನು ಲೋಕೋಪಯೋಗಿ ಇಲಾಖೆಗೆ (PWD) ರವಾನಿಸಿ ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ವಿದ್ಯಾಭಾರತಿ ಕ್ಷೇತ್ರೀಯ ಮಟ್ಟದ ಸ್ಕೇಟಿಂಗ್: ಶ್ರೀರಾಮ ಪಿಯು ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

ಈ ದುರಂತದ ಸುದ್ದಿ ಪತ್ರಿಕೆಯ ತುಣುಕನ್ನು ತಮ್ಮ ‘ಎಕ್ಸ್’ (Twitter) ಖಾತೆಯಲ್ಲಿ ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಆಡಳಿತಾರೂಢ ಬಿಜೆಪಿ ಸರ್ಕಾರದ ಭ್ರಷ್ಟಾಚಾರವೇ ಈ ಸಾವಿಗೆ ಕಾರಣ ಎಂದು ಕಿಡಿಕಾರಿದ್ದಾರೆ. “ಇದಕ್ಕಿಂತ ದುರದೃಷ್ಟಕರ ಸಂಗತಿ ಬೇರೊಂದಿಲ್ಲ; ಆಡಳಿತ ಪಕ್ಷದ ಭ್ರಷ್ಟಾಚಾರದಿಂದಾಗಿ ಇನ್ನೂ ಹುಟ್ಟದ ಮಗುವೂ ಜೀವ ಕಳೆದುಕೊಳ್ಳುವಂತಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *