ಭಾವನಗರ: ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಪೊಲೀಸರು ಕಟ್ಟಿಹಾಕಿ ಹಲ್ಲೆ ನಡೆಸಿ, ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ವಕೀಲ ಪ್ರಣಯ್ ಮಹೇಶ್ವರಿ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ದೂರು ನೀಡಿದ್ದಾರೆ.
ಘಟನೆಯನ್ನು ಸಂವಿಧಾನದ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಬಣ್ಣಿಸಿರುವ ವಕೀಲ ಪ್ರಣಯ್ ಮಹೇಶ್ವರಿ, “ಕೇವಲ ಆರೋಪ ಹೊರಿಸಿದ ತಕ್ಷಣ ಯಾರೂ ಅಪರಾಧಿಯಾಗುವುದಿಲ್ಲ. ವ್ಯಕ್ತಿ ಅಪರಾಧಿಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರ ನ್ಯಾಯಾಲಯಗಳಿಗೆ ಇದೆಯೇ ಹೊರತು ಪೊಲೀಸರಿಗಲ್ಲ,” ಎಂದು ಖಾರವಾಗಿ ಹೇಳಿದ್ದಾರೆ.
ಸಾರ್ವಜನಿಕವಾಗಿಯೇ ಆರೋಪಿಯ ಮೇಲೆ ಈ ರೀತಿ ದೌರ್ಜನ್ಯ ಎಸಗಲಾಗಿದ್ದರೆ, ಇನ್ನು ಸಾರ್ವಜನಿಕರ ಕಣ್ಣಿಗೆ ಕಾಣಿಸದ ಪೊಲೀಸ್ ಠಾಣೆಯ ಒಳಗೆ ಪರಿಸ್ಥಿತಿ ಹೇಗಿರಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಯಾವ ಕಾನೂನಿನಡಿಯಲ್ಲಿ ಆರೋಪಿಯ ಮೇಲೆ ಹಲ್ಲೆ ನಡೆಸಲು ಅಥವಾ ಅಮಾನವೀಯವಾಗಿ ನಡೆದುಕೊಳ್ಳಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ. ಜೊತೆಗೆ ಭಾವನಗರದ ಎಸ್‌ಎಚ್‌ಒ (SHO) ಉನಾದ್ಕತ್ ಹಾಗೂ ಅವರ ತಂಡವನ್ನು ತಕ್ಷಣವೇ ಅಮಾನತುಗೊಳಿಸಿ, ಇಲಾಖಾ ತನಿಖೆಗೆ ಆದೇಶಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಅವರು ಮನವಿ ಮಾಡಿದ್ದಾರೆ.
ದೂರಿನಲ್ಲಿ ಸುಪ್ರೀಂ ಕೋರ್ಟ್‌ನ ಡಿಸೆಂಬರ್ 3, 2020ರ ಐತಿಹಾಸಿಕ ಆದೇಶವನ್ನು ಪ್ರಸ್ತಾಪಿಸಿರುವ ಮಹೇಶ್ವರಿ, ದೇಶದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಡಿಯೋ-ವಿಡಿಯೋ ರೆಕಾರ್ಡಿಂಗ್, ನೈಟ್ ವಿಷನ್ ಹಾಗೂ ಅಗತ್ಯ ಬ್ಯಾಕಪ್ ಸೌಲಭ್ಯವಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿರುವುದನ್ನು ನೆನಪಿಸಿದ್ದಾರೆ.
ಇದನ್ನೂ ಓದಿ: ಬಂಗಾರಪೇಟೆಯಲ್ಲಿ ಬಿರಿಯಾನಿ, ಮೊಸರು ಬಜ್ಜಿಯಲ್ಲಿ ಸತ್ತ ಹಲ್ಲಿ ಪತ್ತೆ
ದೂರಿನಲ್ಲಿ ಮಾಡಲಾಗಿರುವ ಆರೋಪಗಳ ಕುರಿತು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳು ಹಾಗೂ ಅಧಿಕಾರಿಗಳು ತನಿಖೆ ಮತ್ತು ಸತ್ಯಾಸತ್ಯತೆಯ ಪರಿಶೀಲನೆ ನಡೆಸಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

