ಬೆಳ್ತಂಗಡಿ: ಹೆಬ್ಬಾವೊಂದನ್ನು ನುಂಗಲು ಯತ್ನಿಸುತ್ತಿದ್ದ ಸುಮಾರು 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ರಕ್ಷಿಸಿ, ಅರಣ್ಯಕ್ಕೆ ಬಿಡಲಾದ ಅಪರೂಪದ ಹಾಗೂ ರೋಚಕ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಕಾಡಿಂಗ್ ಎಂಬಲ್ಲಿ ನಡೆದಿದೆ.
ತೆಂಕಕಾರಂದೂರು ಗ್ರಾಮದ ಕಾಡಿಂಗ್ ನಿವಾಸಿ ಹಿತೇಶ್ ಎಂಬವರ ತೋಟದಲ್ಲಿ ಶುಕ್ರವಾರ (ಸೆಪ್ಟೆಂಬರ್ 11) ಸಂಜೆ ಈ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು. ತೋಟದಲ್ಲಿದ್ದ ಬೃಹತ್ ಕಾಳಿಂಗ ಸರ್ಪವು ಹೆಬ್ಬಾವನ್ನು ಸಂಪೂರ್ಣವಾಗಿ ನುಂಗುತ್ತಿರುವ ದೃಶ್ಯ ಕಂಡು ಹಿತೇಶ್ ಅವರ ಕುಟುಂಬಸ್ಥರು ತೀವ್ರ ಆತಂಕಕ್ಕೊಳಗಾಗಿದ್ದರು.
ತೋಟದಲ್ಲಿ ಕಾಳಿಂಗ ಸರ್ಪ ಪತ್ತೆಯಾದ ತಕ್ಷಣ ಕುಟುಂಬಸ್ಥರು ಲಾಯಿಲಾದ ಪ್ರಸಿದ್ಧ ಉರಗ ರಕ್ಷಕ ‘ಸ್ನೇಕ್ ಅಶೋಕ್’ ಅವರಿಗೆ ಮಾಹಿತಿ ನೀಡಿದರು. ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಶೋಕ್ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದರು.ಯಾವುದೇ ಸಾರ್ವಜನಿಕರಿಗೆ ಅಥವಾ ಪ್ರಾಣಿಗೆ ಹಾನಿಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.
ಇದನ್ನೂ ಓದಿ: ಮಂಗಳೂರು-ಯಶವಂತಪುರ ‘ವಂದೇ ಭಾರತ್’ 2ನೇ ಟ್ರಯಲ್ ರನ್ ಯಶಸ್ವಿ: ನಿಗದಿಗಿಂತ 55 ನಿಮಿಷ ಮುಂಚಿತವಾಗಿ ತಲುಪಿದ ರೈಲು
ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಹೆದರಿದ ಕಾಳಿಂಗ ಸರ್ಪವು ತಾನು ಅರ್ಧ ನುಂಗಿದ್ದ ಹೆಬ್ಬಾವನ್ನು ಹೊರಗೆ ಕಾರಿದೆ. ತದನಂತರ ಅತ್ಯಂತ ಜಾಣ್ಮೆಯಿಂದ ಕಾಳಿಂಗ ಸರ್ಪವನ್ನು ಸೆರೆಹಿಡಿದು, ಸುರಕ್ಷಿತ ಕಂಟೇನರ್‌ನಲ್ಲಿ ಇರಿಸಲಾಯಿತು. ಸೆರೆಹಿಡಿದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದು, ನಂತರ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ.

