ಕಲ್ಲಡ್ಕ: ಇಲ್ಲಿನ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ವಾಣಿಜ್ಯ ಸಂಘದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ “VISTARA 2K26” ಕಾಮರ್ಸ್ ಫೆಸ್ಟ್ ದಿನಾಂಕ 10.09.2026 ರಂದು ಅತ್ಯಂತ ಸಡಗರದಿಂದ ಜರುಗಿತು.ಅತಿಥಿ ಅಭ್ಯಾಗತರು ಸಾಂಪ್ರದಾಯಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಸ್ವತಃ ತಯಾರಿಸಿದ್ದ ಎಟಿಎಂ (ATM) ಮಾದರಿಯ ಮೂಲಕ ಹಣವನ್ನು ಡ್ರಾ ಮಾಡುವ ಸೃಜನಶೀಲ ವಿಧಾನದ ಮೂಲಕ ಫೆಸ್ಟ್‌ಗೆ ವಿಶೇಷವಾಗಿ ಚಾಲನೆ ನೀಡಿದ್ದು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀರಾಮ ವಿದ್ಯಾ ಕೇಂದ್ರದ ಸಂಸ್ಥಾಪಕರು ಹಾಗೂ ಮಾರ್ಗದರ್ಶಕರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು, “VISTARA 2K26 ಕಾಮರ್ಸ್ ಫೆಸ್ಟ್ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದಲ್ಲಿ ಸಂಶೋಧನೆಗೆ ದಾರಿದೀಪವಾಗಬೇಕು. ವಾಣಿಜ್ಯ ಜ್ಞಾನ, ಸೃಜನಶೀಲತೆ, ವ್ಯವಹಾರಿಕ ಕೌಶಲ್ಯ ಹಾಗೂ ಹೊಸ ಚಿಂತನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಫೆಸ್ಟ್ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನಕ್ಕೂ ದಾರಿದೀಪವಾಗಲಿ,” ಎಂದು ಶುಭ ಹಾರೈಸಿದರು.
ಶ್ರೀರಾಮ ವಿದ್ಯಾ ಕೇಂದ್ರದ ಹಿರಿಯ ವಿದ್ಯಾರ್ಥಿ ಹಾಗೂ ಮಂಗಳೂರಿನ SDM ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಚೇತನ್ ರಾಜ್ ಮಾತನಾಡಿ, “ಶ್ರೀರಾಮ ವಿದ್ಯಾ ಕೇಂದ್ರವು ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುತ್ತಿದೆ,” ಎಂದು ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಸ್ಮರಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ವಿದ್ಯಾ ಕೇಂದ್ರದ ಆಡಳಿತ ಮಂಡಳಿ ಸದಸ್ಯ ನಾಗೇಶ್ ಕಲ್ಲಡ್ಕ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಲು ಪೂರಕವಾಗಿವೆ ಎಂದರು.
ಇದನ್ನೂ ಓದಿ: ಮೋಂತಿಮಾರಿನಲ್ಲಿ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಿಂದ ‘ಉತ್ಕರ್ಷ್ 2026’ ಫೆಸ್ಟ್
ವರದಿಗಾರ, ಗಾಯಕ ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾದ ಸಂತೋಷ್ ಬೇಂಕ್ಯ ಅವರು ಮಾತನಾಡಿ, ವಿದ್ಯಾಸಂಸ್ಥೆ ನೀಡಿದ ಸಂಸ್ಕಾರವು ತಮ್ಮ ಬೆಳವಣಿಗೆಗೆ ಹೇಗೆ ಕಾರಣವಾಯಿತು ಎಂಬುದನ್ನು ಹಂಚಿಕೊಂಡರು. ಈ ಬಾರಿಯ ಕಾಮರ್ಸ್ ಫೆಸ್ಟ್‌ನಲ್ಲಿ 10 ಪ್ರೌಢಶಾಲೆಗಳಿಂದ ಒಟ್ಟು 110 ವಿದ್ಯಾರ್ಥಿಗಳು ಹಾಗೂ 11 ಶಿಕ್ಷಕರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶ್ರೀರಾಮ ಹೈಸ್ಕೂಲ್ ಮುಖ್ಯಗುರು ಗೋಪಾಲ್, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಸಹ ಮುಖ್ಯೋಪಾಧ್ಯಾಯ ಶ್ರೀ ಸುಮಂತ್ ಆಳ್ವ, ಪ್ರಾಂಶುಪಾಲ ವಸಂತ್ ಬಲ್ಲಾಳ್ ಹಾಗೂ ಮಾತೃಭಾರತಿಯ ಉಪಾಧ್ಯಕ್ಷೆ ಶ್ವೇತಾ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಅಶೋಕ್ ಕುಮಾರ್ ಕಾರ್ಯಕ್ರಮವನ್ನು ಚೊಕ್ಕಟವಾಗಿ ನಿರೂಪಿಸಿದರು.

