ಸೌಜನ್ಯ ಕೊಲೆ ಕೇಸ್: 3 ತಿಂಗಳಲ್ಲಿ ಹೊಸ ತಂಡದಿಂದ ಸ್ವತಂತ್ರ ತನಿಖೆಗೆ ಸುಪ್ರೀಂ ಆದೇಶ

ದೆಹಲಿ: ದಶಕಕ್ಕೂ ಹೆಚ್ಚು ಕಾಲದಿಂದ ಭಾರಿ ಸಂಚಲನ ಮೂಡಿಸಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಅಸ್ತು ಎಂದಿದ್ದು, 3 ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಸೌಜನ್ಯ ಅವರ ತಾಯಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಈ ಐತಿಹಾಸಿಕ ಆದೇಶವನ್ನು ಹೊರಡಿಸಿದೆ.

ಈ ಹಿಂದೆ ಈ ಪ್ರಕರಣದ ತನಿಖೆ ನಡೆಸಿದ್ದ ಯಾವುದೇ ತನಿಖಾಧಿಕಾರಿಗಳನ್ನು ಹೊಸ ತನಿಖಾ ತಂಡದಲ್ಲಿ ಸೇರಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಹೊಸ ತನಿಖಾ ತಂಡವು ಸಂಪೂರ್ಣ ಸ್ವತಂತ್ರವಾಗಿ ಹಾಗೂ ನಿಷ್ಪಕ್ಷಪಾತವಾಗಿ ಫ್ರೆಶ್ ಇನ್ವೆಸ್ಟಿಗೇಷನ್ (ಮರು ತನಿಖೆ) ನಡೆಸಬೇಕು. ಮುಂದಿನ 3 ತಿಂಗಳ ಒಳಗಾಗಿ ಸಂಪೂರ್ಣ ತನಿಖೆಯನ್ನು ಪೂರ್ಣಗೊಳಿಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಬೇಕು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ಸುಮಾರು 140 ರಿಂದ 150 ಪುಟಗಳ ಪ್ರಮುಖ ಸಾಕ್ಷ್ಯಗಳನ್ನು ತೆಗೆದುಹಾಕಲಾಗಿದೆ (ನಾಶಪಡಿಸಲಾಗಿದೆ) ಎಂದು ಕೋರ್ಟ್ ಗಮನಕ್ಕೆ ತಂದರು. ಈ ಹಿಂದೆ ಬಂಧಿತನಾಗಿದ್ದ ಸಂತೋಷ್ ರಾವ್ ಸಂಪೂರ್ಣ ನಿರಪರಾಧಿಯಾಗಿದ್ದು, ಈ ಭೀಕರ ಕೃತ್ಯವನ್ನು ಬೇರೆ ಯಾರೋ ಪ್ರಭಾವಿಗಳು ನಡೆಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಇದನ್ನೂ ಓದಿ: ಮಣಿಪಾಲ ಆಸ್ಪತ್ರೆಯ ವೈದ್ಯರ ಅಪರೂಪದ ಸಾಧನೆ: 3 ತಿಂಗಳ ಮಗುವಿನ ಯಕೃತ್ತಿನಲ್ಲಿದ್ದ ಕ್ಯಾನ್ಸರ್ ಗಡ್ಡೆ ಯಶಸ್ವಿ ತೆರವು

ಈ ಹಿಂದೆ ನಡೆದ ತನಿಖೆ ಮತ್ತು ಸಂಗ್ರಹಿಸಲಾದ ಸಾಕ್ಷ್ಯಗಳ ಶೈಲಿ ಹಾಗೂ ಲೋಪದೋಷಗಳ ಕುರಿತು ಸುಪ್ರೀಂ ಕೋರ್ಟ್ ಮುಂಚೆಯೇ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು.ಸುಪ್ರೀಂ ಕೋರ್ಟ್‌ನ ಈ ಕ್ರಾಂತಿಕಾರಿ ಆದೇಶದಿಂದಾಗಿ ಸೌಜನ್ಯ ಕುಟುಂಬಕ್ಕೆ ಹಾಗೂ ಸತ್ಯಾಸತ್ಯತೆ ಹೊರಬರಬೇಕೆಂದು ದಶಕದಿಂದ ಹೋರಾಡುತ್ತಿರುವ ಸಾರ್ವಜನಿಕರಿಗೆ ನ್ಯಾಯ ಸಿಗುವ ಹೊಸ ಭರವಸೆ ಮೂಡಿದೆ. ನೈಜ ಅಪರಾಧಿಗಳಿಗೆ ಶಿಕ್ಷೆಯಾಗಲಿದೆ ಎಂಬ ಆಶಯ ವ್ಯಕ್ತವಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *