ಕೇರಳದಲ್ಲಿ ಭಾರೀ ಮಳೆ, ಭೂಕುಸಿತ: ಐವರು ಸಾವು, ಇಬ್ಬರು ಪತ್ತೆಯಿಲ್ಲ; ಇಡುಕ್ಕಿ, ಕೊಟ್ಟಾಯಂನಲ್ಲಿ ಆರೆಂಜ್ ಅಲರ್ಟ್

ಕೇರಳ; ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಹಾಗೂ ಭೂಕುಸಿತಕ್ಕೆ (Landslides and Flash Floods) ಕನಿಷ್ಠ ಐದು ಜನರು ಬಲಿಯಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಮುಂಬರುವ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದ್ದು, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ (Orange Alert) ಘೋಷಿಸಲಾಗಿದೆ. ಆರೆಂಜ್ ಅಲರ್ಟ್ ಎಂದರೆ 11 ಸೆಂ.ಮೀ ನಿಂದ 20 ಸೆಂ.ಮೀ ವರೆಗೆ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿರುತ್ತದೆ.

ಅತ್ಯಂತ ದುರಂತಕಾರಿ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ವರದಿಯಾಗಿದೆ. ಭಾನುವಾರ ಸಂಜೆ ನಿಲಂಬೂರ್-ಅಮರಂಬಲಂ ವ್ಯಾಪ್ತಿಯ ಕೊಟ್ಟಪುಳ ನದಿಯಲ್ಲಿ ಐವರು ಕೊಚ್ಚಿಹೋಗಿದ್ದಾರೆ. ವಂದೂರ್‌ನಿಂದ ಬಂದಿದ್ದ ಈ ಗುಂಪು ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದಾಗ, ಹಠಾತ್ ಉಂಟಾದ ಪ್ರವಾಹದಿಂದ ನೀರಿನ ಮಟ್ಟ ಏರಿಕೆಯಾಗಿದೆ. ಸ್ಥಳೀಯ ನಿವಾಸಿ ಒಬ್ಬರನ್ನು ರಕ್ಷಿಸಲು ಯಶಸ್ವಿಯಾಗಿದ್ದು, ಅಗ್ನಿಶಾಮಕ ಪಡೆ ಇಬ್ಬರ ಮೃತದೇಹಗಳನ್ನು ಹೊರತೆಗೆದಿದೆ. ನಾಪತ್ತೆಯಾಗಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ರಕ್ಷಣಾ ಕಾರ್ಯಕ್ಕೆ ನೆರವಾಗಲು ವಿಪತ್ತು ನಿರ್ವಹಣಾ ಪಡೆಯ (Disaster Management Force) ವಿಶೇಷ ತಂಡವನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸುವಂತೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ಆದೇಶಿಸಿದ್ದಾರೆ.

ಟೀಕೋಯ್ ಬಳಿಯ ವೆಲತ್ತುಸ್ಸೇರಿಯಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೂಕುಸಿತಕ್ಕೆ ತಮಿಳುನಾಡಿನ ಚೆನ್ನೈ ಮೂಲದ ಸಂಗೀತಾ ಅರುಣ್ ಲಾಲ್ (35) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಇವರು ತಮ್ಮ ಸ್ನೇಹಿತನ ಜೊತೆ ವಾಗಮನ್‌ನಿಂದ ಸ್ಕೂಟರ್‌ನಲ್ಲಿ ಹಿಂತಿರುಗುತ್ತಿದ್ದಾಗ ರಸ್ತೆಗೆ ಮಣ್ಣು ಕುಸಿದು ಬಿದ್ದು ಈ ದುರಂತ ಸಂಭವಿಸಿದೆ. ಜೊತೆಯಲ್ಲಿದ್ದ ಸ್ನೇಹಿತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಮಧ್ಯಾಹ್ನ ಕೊಟ್ಟಕಂಬೂರಿನಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಶೆಡ್‌ನಲ್ಲಿ ಆಶ್ರಯ ಪಡೆದಿದ್ದ ಮೂವರ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬ ಮಹಿಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಮಣಿಪಾಲ ಆಸ್ಪತ್ರೆಯ ವೈದ್ಯರ ಅಪರೂಪದ ಸಾಧನೆ: 3 ತಿಂಗಳ ಮಗುವಿನ ಯಕೃತ್ತಿನಲ್ಲಿದ್ದ ಕ್ಯಾನ್ಸರ್ ಗಡ್ಡೆ ಯಶಸ್ವಿ ತೆರವು

ಹೈ ಅಲರ್ಟ್‌ನಲ್ಲಿ ಕೇರಳ ಸರ್ಕಾರ:

ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಪ್ರತಿ ಗಂಟೆಗೆ ಒಮ್ಮೆ ಪರಿಸ್ಥಿತಿಯನ್ನು ಪರಾಮರ್ಶಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಪತ್ತು ನಿರ್ವಹಣಾ ಪ್ರಧಿಕಾರದ ಕಮಿಷನರ್ ವಿಘ್ನೇಶ್ವರಿ ಐಎಎಸ್ ಅವರು ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ತಗ್ಗು ಪ್ರದೇಶ ಹಾಗೂ ಭೂಸಸಿತದ ಅಪಾಯವಿರುವ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.

ಹವಾಮಾನ ಇಲಾಖೆ ವರದಿಯ ಪ್ರಕಾರ, ಈ ವರ್ಷ ಜೂನ್ 1 ರಿಂದ ಸೆಪ್ಟೆಂಬರ್ 17 ರವರೆಗೆ ಕೇರಳದಲ್ಲಿ ವಾಡಿಕೆಗಿಂತ ಶೇ. 28 ರಷ್ಟು ಕಡಿಮೆ ಮಳೆಯಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *