ಯಾರಾದರೂ ಹೆಸರುಗಳನ್ನು ಮರೆಯಲು ಪ್ರಾರಂಭಿಸಿದರೆ, ವಸ್ತುಗಳನ್ನು ಇಟ್ಟ ಜಾಗ ಮರೆತರೆ ಅಥವಾ ಇತ್ತೀಚಿನ ಸಂಭಾಷಣೆಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗದಿದ್ದರೆ, ಅದನ್ನು ತಕ್ಷಣವೇ ‘ಆಲ್ಝೈಮರ್ಸ್’ (Alzheimer’s) ಅಥವಾ ‘ಡಿಮೆನ್ಷಿಯಾ’ (Dementia) ಇರಬಹುದು ಎಂದು ಶಂಕಿಸಲಾಗುತ್ತದೆ. ಆದರೆ, ನೆನಪಿನ ಶಕ್ತಿ ಅಥವಾ ಆಲೋಚನಾ ಸಾಮರ್ಥ್ಯದಲ್ಲಿ ಉಂಟಾಗುವ ಪ್ರತಿಯೊಂದು ಸಮಸ್ಯೆಯೂ ಡಿಮೆನ್ಷಿಯಾ ಲಕ್ಷಣವಾಗಿರುವುದಿಲ್ಲ.
ಸೂಕ್ತ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ನೆನಪಿನ ಶಕ್ತಿ ಕುಸಿತಕ್ಕೆ ಹಲವು ಗುಣಪಡಿಸಬಹುದಾದ ವೈದ್ಯಕೀಯ, ಮಾನಸಿಕ ಹಾಗೂ ಜೀವನಶೈಲಿ ಆಧಾರಿತ ಕಾರಣಗಳು ಬೆಳಕಿಗೆ ಬರಬಹುದು. ಸರಿಯಾದ ಕಾರಣ ತಿಳಿದು ಚಿಕಿತ್ಸೆ ಪಡೆದರೆ ನೆನಪಿನ ಶಕ್ತಿಯನ್ನು ಮತ್ತೆ ಉತ್ತಮಗೊಳಿಸಲು ಸಾಧ್ಯವಿದೆ.
ಜ್ಞಾಪಕಶಕ್ತಿ ಕುಸಿತಕ್ಕೆ ಪ್ರಮುಖ 6 ಮುಖ್ಯ ಕಾರಣಗಳು:
1. ವಿಟಮಿನ್ B12 ಕೊರತೆ (Vitamin B12 Deficiency):
ದೇಹದಲ್ಲಿ ವಿಟಮಿನ್ B12 ಮಟ್ಟ ಕಡಿಮೆಯಾದರೆ ನರಮಂಡಲದ ಮೇಲೆ ಪರಿಣಾಮ ಬೀರಿ ಏಕಾಗ್ರತೆ, ನೆನಪಿನ ಶಕ್ತಿ ಮತ್ತು ಆಲೋಚನಾ ಸಾಮರ್ಥ್ಯ ಕುಗ್ಗುತ್ತದೆ. ಇದರೊಂದಿಗೆ ಕೈ-ಕಾಲು ಶೂನ್ಯವಾಗುವುದು, ಜುಮ್ಮೆನ್ನುವುದು, ನಿಶ್ಯಕ್ತಿ ಹಾಗೂ ಸಮತೋಲನ ತಪ್ಪುವುದು ಕಂಡುಬರುತ್ತದೆ.
2. ಥೈರಾಯ್ಡ್ ಸಮಸ್ಯೆಗಳು (Thyroid Disorders):
ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡದಿದ್ದಾಗ (Underactive Thyroid) ಮಾನಸಿಕ ಜಾಗರೂಕತೆ ಕಡಿಮೆಯಾಗುತ್ತದೆ. ಆಯಾಸ, ಮಲಬದ್ಧತೆ, ಅತಿಯಾದ ಚಳಿ, ಮರೆವು ಹಾಗೂ ಏಕಾಗ್ರತೆಯ ಕೊರತೆ ಇದರ ಲಕ್ಷಣಗಳು. ರಕ್ತ ಪರೀಕ್ಷೆಯ ಮೂಲಕ ಇದನ್ನು ಸುಲಭವಾಗಿ ಪತ್ತೆಹಚ್ಚಬಹುದು.
3. ಕಳಪೆ ನಿದ್ರೆ ಹಾಗೂ ಸ್ಲೀಪ್ ಅಪ್ನಿಯಾ (Poor Sleep & Sleep Apnoea):
ನಿದ್ರೆಯ ಅಭಾವವು ಹೊಸ ವಿಷಯಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ನಿದ್ರೆಯ ಸಮಯದಲ್ಲಿ ಉಸಿರಾಟದಲ್ಲಿ ಪದೇ ಪದೇ ಅಡೆತಡೆ ಉಂಟಾಗುವ ‘ಸ್ಲೀಪ್ ಅಪ್ನಿಯಾ’ ಸಮಸ್ಯೆಯು ಹಗಲಿನಲ್ಲಿ ಅತಿಯಾದ ಆಯಾಸ ಹಾಗೂ ಆಲೋಚನಾ ಶಕ್ತಿಯ ಕುಸಿತಕ್ಕೆ ಕಾರಣವಾಗುತ್ತದೆ. ಗೊರಕೆ ಮತ್ತು ಬೆಳಗಿನ ತಲೆನೋವು ಇದರ ಪ್ರಮುಖ ಸೂಚನೆಗಳಾಗಿವೆ.
4. ಖಿನ್ನತೆ (Depression):
ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗೆ ಏಕಾಗ್ರತೆಯ ಕೊರತೆ, ಆಸಕ್ತಿ ಇಲ್ಲದಿರುವುದು ಹಾಗೂ ಹೊಸ ವಿಷಯಗಳನ್ನು ಪ್ರೊಸೆಸ್ ಮಾಡಲು ಸಾಧ್ಯವಾಗುವುದಿಲ್ಲ. ಇಲ್ಲಿ ವ್ಯಕ್ತಿಯು ವಿಷಯಗಳನ್ನು ಮರೆಯುವುದಕ್ಕಿಂತ ಹೆಚ್ಚಾಗಿ ಏಕಾಗ್ರತೆಯ ಕೊರತೆಯಿಂದಾಗಿ ಗಮನ ಹರಿಸಲು ವಿಫಲನಾಗುತ್ತಾನೆ.
ಇದನ್ನೂ ಓದಿ: ಮಣಿಪಾಲ ಆಸ್ಪತ್ರೆಯ ವೈದ್ಯರ ಅಪರೂಪದ ಸಾಧನೆ: 3 ತಿಂಗಳ ಮಗುವಿನ ಯಕೃತ್ತಿನಲ್ಲಿದ್ದ ಕ್ಯಾನ್ಸರ್ ಗಡ್ಡೆ ಯಶಸ್ವಿ ತೆರವು
5. ಔಷಧಗಳ ಅಡ್ಡಪರಿಣಾಮ (Side Effects of Medication):
ಕೆಲವು ಮಾತ್ರೆಗಳು ಅಥವಾ ಒಂದಕ್ಕಿಂತ ಹೆಚ್ಚು ಔಷಧಗಳನ್ನು ಒಟ್ಟಿಗೆ ಸೇವಿಸುವುದರಿಂದ ಮಾನಸಿಕ ಜಾಗರೂಕತೆ ಹಾಗೂ ನೆನಪಿನ ಶಕ್ತಿ ಮೇಲಿನ ಹದಗೆಡಬಹುದು. ವಿಶೇಷವಾಗಿ ನಿದ್ರೆ ಮಾತ್ರೆಗಳು, ಅಲರ್ಜಿ ನಿವಾರಕಗಳು (Antihistamines) ಹಾಗೂ ನೋವು ನಿವಾರಕಗಳು ಗೊಂದಲ ಮತ್ತು ತೂಕಡಿಕೆಯನ್ನು ಉಂಟುಮಾಡಬಹುದು.
6. ಅತಿಯಾದ ಮದ್ಯಪಾನ (Overconsumption of Alcohol):
ಸತತವಾಗಿ ಮದ್ಯಪಾನ ಮಾಡುವುದರಿಂದ ಮಿದುಳಿನ ಕಾರ್ಯಕ್ಷಮತೆ ಶಾಶ್ವತವಾಗಿ ಹಾನಿಗೊಳಗಾಗಬಹುದು. ಜೊತೆಗೆ ಇದು ಪೋಷಕಾಂಶಗಳ ಕೊರತೆಯನ್ನು ಹೆಚ್ಚಿಸಿ, ನಿದ್ರೆಯ ಮೇಲೆಯೂ ದುಷ್ಪರಿಣಾಮ ಬೀರುತ್ತದೆ.
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ನೆನಪಿನ ಶಕ್ತಿಯ ಅಭಾವವು ದಿನನಿತ್ಯದ ಕೆಲಸ ಕಾರ್ಯಗಳು, ಕಚೇರಿ ಕೆಲಸ, ಹಣಕಾಸಿನ ವಹಿವಾಟುಗಳು, ಮಾತ್ರೆ ಸೇವಿಸುವ ಸಮಯ ಹಾಗೂ ವ್ಯಕ್ತಿಯ ಸುರಕ್ಷತೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

