ದೆಹಲಿ: ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರನ್ನು ಭೇಟಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಪದ್ಮವಿಭೂಷಣ ಯತಿಕುಲ ಚಕ್ರವರ್ತಿ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಆಚರಣೆಯ ಅಧಿಕೃತ ‘ಲೋಗೋ’ (Logo) ಅನ್ನು ಅನಾವರಣಗೊಳಿಸಿದರು.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಇತರ ಗಣ್ಯರೊಂದಿಗೆ ಮುಖಾಮುಖಿಯಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಬಳಿಕ ಮೋದಿ ಅವರು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಸೇವೆಯನ್ನು ಸ್ಮರಿಸಿ ಭಾವಪೂರ್ಣವಾಗಿ ಬರೆದುಕೊಂಡಿದ್ದಾರೆ.

ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಭಕ್ತಿ, ಜ್ಞಾನ ಮತ್ತು ಸಮಾಜ ಸೇವೆಯಿಂದ ಕೂಡಿದ ಜೀವನವು ಕೋಟ್ಯಂತರ ಜನರಿಗೆ ಸದಾ ಪ್ರೇರಣೆಯಾಗಿದೆ” ಎಂದಿದ್ದಾರೆ. “ಅವರ ಜನ್ಮಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳು ಶ್ರೀಗಳ ದಿವ್ಯ ಆದರ್ಶ ಮತ್ತು ಮೌಲ್ಯಗಳನ್ನು ಮತ್ತಷ್ಟು ಮುನ್ನೆಡೆಸಲಿವೆ” ಎಂದು ಆಶಂಸಿದ್ದಾರೆ.
ಇದನ್ನೂ ಓದಿ: ದಿಗ್ಗಜ ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗರಿ
ಪೇಜಾವರ ಮಠದ ಹಿರಿಯ ಯತಿಗಳಾಗಿದ್ದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು (1931–2019) ತಮ್ಮ ಎಂಟು ದಶಕಗಳ ಸನ್ಯಾಸ ಜೀವನದಲ್ಲಿ ಆಧ್ಯಾತ್ಮ, ಸಂಸ್ಕೃತ ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ದಲಿತ ಕೇರಿಗಳ ಭೇಟಿ, ಸಾಮಾಜಿಕ ಸಾಮರಸ್ಯದ ಸಂದೇಶ, ಶ್ರೀರಾಮ ಜನ್ಮಭೂಮಿ ಚಳವಳಿ ಹಾಗೂ ದುರಂತಗಳ ವೇಳೆಯಲ್ಲಿನ ಪರಿಹಾರ ಕಾರ್ಯಗಳ ಮೂಲಕ ಅವರು ದೇಶಾದ್ಯಂತ ಅಪಾರ ಭಕ್ತವೃಂದವನ್ನು ಸಂಪಾದಿಸಿದ್ದರು. ಅವರ ಶತಮಾನೋತ್ಸವದ ನೆನಪಿಗಾಗಿ ದೇಶಾದ್ಯಂತ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪೇಜಾವರ ಮಠ ಯೋಜನೆ ರೂಪಿಸಿದ್ದು, ಈ ಬೃಹತ್ ಆಚರಣೆಗೆ ಪ್ರಧಾನಿ ಮೋದಿಯವರಿಂದ ಲೋಗೋ ಬಿಡುಗಡೆಯೊಂದಿಗೆ ಚಾಲನೆ ಸಿಕ್ಕಂತಾಗಿದೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

