ಶಾರ್ಜಾ: ಯುನೈಟೆಡ್ ಅರಬ್ ಎಮಿರೇಟ್ಸ್ನ (UAE) ಶಾರ್ಜಾದಲ್ಲಿ ಕೆಲಸ ಮಾಡುತ್ತಿದ್ದ ಉಡುಪಿ ಜಿಲ್ಲೆಯ ಮೂಲದ ವ್ಯಕ್ತಿಯೊಬ್ಬರು ಜುಲೈ ತಿಂಗಳಿನಲ್ಲಿ ಅತ್ಯಂತ ಭೀಕರ ಹಾಗೂ ಭೀಕರವಾಗಿ ಕೊಲೆಯಾಗಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಉಡುಪಿಯ ಅಲ್ವಿನ್ ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದ್ದು, ಅವರ ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಎರಡು ಚೀಲಗಳಲ್ಲಿ ತುಂಬಿ ಕಾರಿನಲ್ಲಿಟ್ಟಿದ್ದ ವಿಕೃತ ಕೃತ್ಯ ಬಯಲಾಗಿದೆ.
ಘಟನೆ ನಡೆದ ದಿನದಿಂದ ಮೃತರ ಪತ್ನಿ ಹಾಗೂ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಆಕೆಯ ಹದಿಹರೆಯದ ಮಗ ಕಣ್ಮರೆಯಾಗಿದ್ದು, ಪ್ರಕರಣದ ಸುತ್ತ ನಿಗೂಢತೆ ಹೆಚ್ಚಾಗಿದೆ. ಕಳೆದ 14 ವರ್ಷಗಳಿಂದ ಶಾರ್ಜಾ ಏರ್ಪೋರ್ಟ್ನಲ್ಲಿ ಉದ್ಯೋಗದಲ್ಲಿದ್ದ ಪ್ರಕಾಶ್ ಕುಂದರ್ ಅವರು, ಪತ್ನಿ ಟೀನಾ ಕುಂದರ್ (ಶಾಲಾ ಶಿಕ್ಷಕಿ) ಹಾಗೂ ಪುತ್ರನೊಂದಿಗೆ ಯುಎಇನಲ್ಲಿ ನೆಲೆಸಿದ್ದರು.
ಜುಲೈ 20ರ ಸುಮಾರಿಗೆ ಪ್ರಕಾಶ್ ಅವರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಅವರು ಪ್ರಕಾಶ್ಗೆ ಕರೆ ಮಾಡಿದಾಗ ಯಾವುದೇ ಉತ್ತರ ಸಿಗಲಿಲ್ಲ. ಬದಲಿಗೆ “ನಾನ್ ಆರಾಮಾಗಿದ್ದೇನೆ” ಎಂದು ಮೊಬೈಲ್ನಿಂದ ಪಠ್ಯ ಸಂದೇಶ (Text Message) ಬಂದಿತ್ತು. ಪ್ರಕಾಶ್ ಎಂದಿಗೂ ‘ವಾಯ್ಸ್ ಮೆಸೇಜ್’ ಮೂಲಕವೇ ಮಾತನಾಡುತ್ತಿದ್ದರಿಂದ, ಕುಟುಂಬಸ್ಥರಿಗೆ ಸಂಶಯ ಮೂಡಿದೆ. ಪ್ರಕಾಶ್ ಅವರ ಶಾರ್ಜಾ ಸ್ನೇಹಿತನ ಮೂಲಕ ಅವರ ಕಂಪನಿಯನ್ನು ವಿಚಾರಿಸಿದಾಗ, “ಪ್ರಕಾಶ್ ಭಾರತಕ್ಕೆ ಹೋಗಿದ್ದಾರೆ” ಎಂದು ಸಂಸ್ಥೆ ತಿಳಿಸಿತ್ತು. ಆದರೆ ಪಾಸ್ಪೋರ್ಟ್ ಪರಿಶೀಲಿಸಿದಾಗ ಅವರು ಯುಎಇನಲ್ಲೇ ಇರುವುದು ಖಚಿತವಾಗಿ, ನಾಪತ್ತೆ ದೂರು ದಾಖಲಿಸಲಾಯಿತು.
ಇದನ್ನೂ ಓದಿ: ದಿಗ್ಗಜ ನಟ ಅನಂತ್ ನಾಗ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗರಿ
ಒಮಾನ್ ರಸ್ತೆಯಲ್ಲಿದ್ದ ಕಾರಿನಲ್ಲಿ ಶವ ಪತ್ತೆ: ತನಿಖೆ ಕೈಗೆತ್ತಿಕೊಂಡ ಶಾರ್ಜಾ ಪೊಲೀಸರಿಗೆ, ಒಮಾನ್ ಕಡೆಗೆ ತೆರಳುವ ಮಾರ್ಗದಲ್ಲಿ ನಿಲ್ಲಿಸಲಾಗಿದ್ದ ಪ್ರಕಾಶ್ ಅವರ ಕಾರಿನಲ್ಲಿದ್ದ ಎರಡು ಚೀಲಗಳಲ್ಲಿ 9 ತುಂಡುಗಳಾಗಿ ವಿಂಗಡಿಸಲಾಗಿದ್ದ ಶವ ಪತ್ತೆಯಾಗಿದೆ. ಬಳಿಕ ಅದು ಪ್ರಕಾಶ್ ಅವರದ್ದೇ ಮೃತದೇಹ ಎಂದು ಗುರುತಿಸಲಾಗಿದೆ. ಕೊಲೆ ನಡೆದ ದಿನದಿಂದ ಪ್ರಕಾಶ್ ಅವರ ಪತ್ನಿ ಟೀನಾ ಕುಂದರ್ ಹಾಗೂ ಪುತ್ರ ಇಬ್ಬರೂ ನಾಪತ್ತೆಯಾಗಿದ್ದಾರೆ.
ಇಬ್ಬರೂ ಶಾರ್ಜಾ ತೊರೆದು ಭಾರತಕ್ಕೆ ಅಥವಾ ಬೇರೆ ಯಾವುದಾದರೂ ದೇಶಕ್ಕೆ ಹೋಗಿರಬಹುದು ಎಂದು ಶಂಕಿಸಲಾಗಿದ್ದರೂ, ಇದುವರೆಗೆ ಅವರ ಇರುವಿಕೆ ದೃಢಪಟ್ಟಿಲ್ಲ. ಈ ಕೊಲೆ ಪ್ರಕರಣದಲ್ಲಿ ಪತ್ನಿ ಟೀನಾ ಅವರ ಭಾಗಿಯಾಗುವಿಕೆಯ ಕುರಿತು ವರದಿಗಳು ಅನುಮಾನ ವ್ಯಕ್ತಪಡಿಸಿವೆ. ಆದರೆ, ದಂಪತಿಗಳ ನಡುವೆ ಯಾವುದೇ ವೈಮನಸ್ಸಿದ್ದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.
ಉಡುಪಿ ಎಸ್ಪಿ ಭೇಟಿ – ಮೃತದೇಹ ತರಲು ಕುಟುಂಬದ ಯತ್ನ:
ಘಟನೆ ಬೆಳಕಿಗೆ ಬಂದ ನಂತರ ಮೃತರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಅವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು (SP) ಭೇಟಿಯಾಗಿ, ಕಾನೂನು ನೆರವು ಹಾಗೂ ತನಿಖೆಗೆ ಸಹಾಯ ಕೋರಿ ಮನವಿ ಸಲ್ಲಿಸಿದ್ದಾರೆ. ಯುಎಇನಲ್ಲಿ ಅಗತ್ಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಕಾಯುತ್ತಿದ್ದಾರೆ. ಜೊತೆಗೆ, ಕೊಲೆಯ ನಿಜವಾದ ಕಾರಣ ಹಾಗೂ ನಾಪತ್ತೆಯಾಗಿರುವ ಪತ್ನಿ ಮತ್ತು ಮಗನ ಸುಳಿವು ನೀಡುವಂತೆ ಶಾರ್ಜಾ ಅಧಿಕಾರಿಗಳನ್ನು ಪ್ರಕಾಶ್ ಕುಟುಂಬ ಆಗ್ರಹಿಸಿದೆ. ಉಡುಪಿ ಪೊಲೀಸರು ಯುಎಇ ಅಧಿಕಾರಿಗಳಿಂದ ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದಾರೆ.

