Breaking News

ತಮಿಳುನಾಡು ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಗೋಮಾಂಸ ಸೇರ್ಪಡೆ ಪ್ರಸ್ತಾಪ?: ವಿದ್ಯಾರ್ಥಿಗಳಲ್ಲಿ ಭಿನ್ನಾಭಿಪ್ರಾಯ

ಚೆನ್ನೈ: ತಮಿಳುನಾಡಿನ ಸರ್ಕಾರಿ ಮತ್ತು ಸಾಮಾಜಿಕ ನ್ಯಾಯ ಇಲಾಖೆಯ ವಿದ್ಯಾರ್ಥಿ ನಿಲಯಗಳ (Government Hostels) ಮೆನುವಿನಲ್ಲಿ ಗೋಮಾಂಸ (Beef) ಸೇರಿಸಬೇಕೆಂಬ ಪ್ರಸ್ತಾಪವೊಂದು ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನವಿಯ ಮೇರೆಗೆ ಈ ಕುರಿತು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ನೀಡಿರುವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಚೆನ್ನೈನ ಎಂ.ಸಿ. ರಾಜಾ ಸಾಮಾಜಿಕ ನ್ಯಾಯ ಹಾಸ್ಟೆಲ್‌ನ ಸೌಲಭ್ಯಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ಈ ವಿಷಯವನ್ನು ತಿಳಿಸಿದ್ದಾರೆ. ಪ್ರಸ್ತುತ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಚಿಕನ್, ಮಟನ್ ಹಾಗೂ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲಾಗುತ್ತಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಕೆಲವು ವಿದ್ಯಾರ್ಥಿಗಳು, ಮಟನ್ ಬೆಲೆ ದುಬಾರಿಯಾಗಿರುವುದರಿಂದ ಮನೆಗಳಲ್ಲಿ ಅದನ್ನು ಹೆಚ್ಚಾಗಿ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಮಟನ್‌ಗೆ ಪರ್ಯಾಯವಾಗಿ ಗೋಮಾಂಸವನ್ನು ಮೆನುವಿನಲ್ಲಿ ಸೇರಿಸುವಂತೆ ಮನವಿ ಮಾಡಿದ್ದಾರೆ.

ಹಾಸ್ಟೆಲ್ ಮೆನುವಿನಲ್ಲಿ ಗೋಮಾಂಸ ಸೇರಿಸುವ ವಿಷಯದಲ್ಲಿ ಸ್ವತಃ ವಿದ್ಯಾರ್ಥಿಗಳಲ್ಲೇ ವಿಭಿನ್ನ ಅಭಿಪ್ರಾಯಗಳಿವೆ. ಈ ಬಗ್ಗೆ ಸ್ಪಷ್ಟಪಡಿಸಿದ ಸಚಿವ ವನ್ನಿ ಅರಸು, “ಕೆಲವು ವಿದ್ಯಾರ್ಥಿಗಳು ಗೋಮಾಂಸ ಬೇಕು ಎಂದರೆ, ಇನ್ನು ಕೆಲವರು ಇದನ್ನು ವಿರೋಧಿಸಿದ್ದಾರೆ. ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಪಡೆದು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ ನಂತರವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು” ಎಂದಿದ್ದಾರೆ. ಸಂಸ್ಥೆಯು ಇತ್ತೀಚೆಗಷ್ಟೇ ವಿದ್ಯಾರ್ಥಿಗಳ ಇಷ್ಟಕ್ಕೆ ತಕ್ಕಂತೆ ಉಪ್ಮಾ, ಶ್ಯಾವಿಗೆ ಕಿಚಡಿಯಂತಹ ಉಪಹಾರಗಳನ್ನು ತೆಗೆದು ಇಡ್ಲಿ-ದೋಸೆಯನ್ನು ಮೆನುವಿನಲ್ಲಿ ಸೇರಿಸಿದೆ.

ಇದನ್ನೂ ಓದಿ: ದಿಗ್ಗಜ ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗರಿ

ಹಾಸ್ಟೆಲ್‌ಗಳಲ್ಲಿ ಗೋಮಾಂಸ ಸೇರ್ಪಡೆ ಪ್ರಸ್ತಾಪಕ್ಕೆ ಪುದುಯ ತಮಿಳಗಂ ಪಕ್ಷದ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಕೆ. ಕೃಷ್ಣಸಾಮಿ ಕಠಿಣ ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ವನ್ನಿ ಅರಸು ಅವರು ತಮ್ಮ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಗೋಮಾಂಸ ನೀಡುವ ಪ್ರಸ್ತಾಪ ಸಂಪೂರ್ಣ ಕಂಡನಾರ್ಹ, “ತಮಿಳುನಾಡಿನ ಬಹುತೇಕ ಮಾಂಸಾಹಾರಿಗಳು ಚಿಕನ್ ಮತ್ತು ಮಟನ್ ಸೇವಿಸುತ್ತಾರೆ, ಆದರೆ ಗೋಮಾಂಸ ಸಂಸ್ಕೃತಿ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಸರ್ಕಾರದ ಗಮನವು ವಿದ್ಯಾರ್ಥಿಗಳಿಗೆ ಪ್ರೋಟೀನ್, ಜೀವಸತ್ವಗಳುಳ್ಳ ಸಮತೋಲಿತ ಪೌಷ್ಟಿಕ ಆಹಾರ, ದಿನವೂ ಮೊಟ್ಟೆ ಹಾಗೂ ವಾರಕ್ಕೆ ಎರಡೆರಡು ಬಾರಿ ಚಿಕನ್-ಮಟನ್ ನೀಡುವುದರ ಮೇಲಿರಬೇಕೇ ಹೊರತು ವಿವಾದಾತ್ಮಕ ಆಹಾರ ಸಂಸ್ಕೃತಿಯ ಮೇಲಲ್ಲ” ಎಂದು ಕಿಡಿಕಾರಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *