ಗೋಕರ್ಣ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್ (Kudle Beach) ನಲ್ಲಿ ಶನಿವಾರ ಭೀಕರ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಸಮುದ್ರದಲ್ಲಿ ಈಜಲು ತೆರಳಿ ಬೃಹತ್ ಅಲೆಗಳ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಪ್ರವಾಸಿಗರನ್ನು ಸ್ಥಳೀಯ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಹಾಗೂ ಲೈಫ್‌ಗಾರ್ಡ್‌ಗಳು ಜಂಟಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.ರಕ್ಷಿಸಲ್ಪಟ್ಟ ಪ್ರವಾಸಿಗರನ್ನು ಬೆಂಗಳೂರು ಮೂಲದ ಹರಿಬಾಬು ಎಂ. ಹಾಗೂ ಚೆಲುವರಾಜ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಮೂವರು ಸ್ನೇಹಿತರ ತಂಡ ಗೋಕರ್ಣ ಪ್ರವಾಸಕ್ಕಾಗಿ ಆಗಮಿಸಿತ್ತು. ಪ್ರವಾಸದ ಭಾಗವಾಗಿ ಕುಡ್ಲೆ ಬೀಚ್‌ಗೆ ತೆರಳಿದ್ದ ಇವರು ಸಮುದ್ರದ ನೀರಿನಲ್ಲಿ ಆಟವಾಡಲು ಹಾಗೂ ಈಜಲು ತೆರಳಿದ್ದರು. ಸುಳಿಗೆ ಸಿಲುಕಿದ ಇಬ್ಬರು: ಈಜಾಡುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಎದ್ದ ದೈತ್ಯ ಅಲೆ ಮತ್ತು ಸಮುದ್ರದ ಬಲವಾದ ಸುಳಿಗೆ ಸಿಲುಕಿದ ಹರಿಬಾಬು ಹಾಗೂ ಚೆಲುವರಾಜ್ ದಡದಿಂದ ಆಳದ ಕಡೆಗೆ ಕೊಚ್ಚಿ ಹೋಗಲು ಪ್ರಾರಂಭಿಸಿದರು.
ಇದನ್ನೂ ಓದಿ: ವಿಧಾನಸೌಧದಲ್ಲಿ ‘ಉರ್ದು ಹಬ್ಬ’ ಆಚರಣೆಗೆ ಸರ್ಕಾರದ ನಿರ್ಧಾರ: ವೋಟ್‌ಬ್ಯಾಂಕ್ ರಾಜಕಾರಣ ಎಂದು ಬಿಜೆಪಿ ಆಕ್ರೋಶ
ಇಬ್ಬರು ಪ್ರವಾಸಿಗರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದುದನ್ನು ಗಮನಿಸಿದ ‘ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್’ (Mystic Gokarna Adventure Water Sports) ಸಂಸ್ಥೆಯ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾದರು. ಜಂಟಿ ಕಾರ್ಯಾಚರಣೆ: ಯಾವುದೇ ವಿಳಂಬ ಮಾಡದೆ ವಾಟರ್ ಬೈಕ್ (Jet Ski) ಮೂಲಕ ಜಲರಾಶಿಯತ್ತ ಧಾವಿಸಿದ ಸಿಬ್ಬಂದಿ, ಲೈಫ್‌ಗಾರ್ಡ್ ಸಿಬ್ಬಂದಿಯ ಸಮಯೋಚಿತ ನೆರವಿನೊಂದಿಗೆ ಇಬ್ಬರನ್ನೂ ಸುರಕ್ಷಿತವಾಗಿ ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.
ಸಿಬ್ಬಂದಿಯ ಈ ಜಾಗರೂಕತೆ ಹಾಗೂ ಸಾಹಸಮಯ ಹೆಜ್ಜೆಗೆ ಪ್ರವಾಸಿಗರು ಮತ್ತು ಸ್ಥಳೀಯ ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮುದ್ರದಲ್ಲಿ ಆಟವಾಡುವಾಗ ಪ್ರವಾಸಿಗರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಲೈಫ್‌ಗಾರ್ಡ್ ಸಿಬ್ಬಂದಿ ಮನವಿ ಮಾಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

