ಗಗನದಲ್ಲೇ ಸಹ-ಪೈಲಟ್ ಜತೆ ಹೋರಾಡಿ, ತೀವ್ರ ಗಾಯಗೊಂಡಿದ್ದರೂ 172 ಪ್ರಯಾಣಿಕರು ಮತ್ತು ಸಿಬ್ಬಂದಿಯ ಜೀವ ರಕ್ಷಿಸಿದ ಭಾರತೀಯ ಮೂಲದ ಫ್ಲೈದುಬೈ ಪೈಲಟ್ ಹಾಗೂ ರಿಯಲ್ ಹೀರೋ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರನ್ನು ದುಬೈನ ಯುವರಾಜ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿ ಹಣೆಗೆ ಮುತ್ತಿಟ್ಟು ಆತ್ಮೀಯವಾಗಿ ತಬ್ಬಿಕೊಂಡು ಸಾಂತ್ವನ ಹೇಳಿದ್ದಾರೆ.
ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಮಚ್ಚಾರ್ ಅವರ ಕುಶಲೋಪರಿ ವಿಚಾರಿಸಿದ ಯುವರಾಜ, ಅವರ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆಗೆ ದೇಶದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಆಸ್ಪತ್ರೆ ಭೇಟಿಯ ನಂತರ ಯುವರಾಜ ಶೇಖ್ ಹಮ್ದಾನ್ ಅವರು ಸ್ಮಿತ್ ಮಚ್ಚಾರ್ ಅವರನ್ನು ತಬ್ಬಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡು ಹೀಗೆ ಬರೆದುಕೊಂಡಿದ್ದಾರೆ.
ಎಕ್ಸ್ ಟ್ವೀಟ್ ಇಲ್ಲಿದೆ ನೋಡಿ:
Dubai’s Crown Prince, Sheikh Hamdan bin Mohammed, visited injured Indian Flydubai captain Smit Machchhar in hospital and thanked him for his bravery. pic.twitter.com/koEVKaaLZx
— Monojit Sinha (@MonojitSinha11) October 3, 2026
“ನಮ್ಮ ಕಡೆಯಿಂದ ಮತ್ತು ನಮ್ಮ ದೇಶದ ನಾಯಕತ್ವದ ಕಡೆಯಿಂದ ಅವರಿಗೆ ಸಂಪೂರ್ಣ ಮೆಚ್ಚುಗೆ ಹಾಗೂ ಶ್ಲಾಘನೆಗಳು ಸಲ್ಲಿಕೆಯಾಗುತ್ತವೆ. ಅವರು ನಮ್ಮ ತಂಡದ ಭಾಗವಾಗಿದ್ದಾರೆ, ನಮ್ಮ ದೇಶದ ಕಥೆಯ ಭಾಗವಾಗಿದ್ದಾರೆ ಮತ್ತು ಯುಎಇ (UAE) ಎಂದರೆ ಏನೆಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ – ಕರುಣೆ, ಶಾಂತಿ ಮತ್ತು ಜೀವ ರಕ್ಷಣೆಯ ದೇಶ ಎಂಬ ಹೆಮ್ಮೆ ನಮಗಿದೆ.”
ದುಬೈನಿಂದ ಟೆಲ್ ಅವೀವ್‌ಗೆ ಹಾರಾಟ ನಡೆಸುತ್ತಿದ್ದ ‘ಫ್ಲೈದುಬೈ’ (flydubai) ವಿಮಾನದಲ್ಲಿದ್ದ ಒಮಾನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮಾಮಿ (Hamam Alhammami), ಕಾಕ್‌ಪಿಟ್ ನಲ್ಲಿದ್ದ ತುರ್ತು ಕೊಡಲಿಯಿಂದ (Cockpit crash axe) ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ದಿಢೀರ್ ಭೀಕರ ದಾಳಿ ನಡೆಸಿದ್ದನು. ಪೈಲಟ್‌ಗಳ ನಡುವಿನ ಸಂಘರ್ಷದಿಂದಾಗಿ ವಿಮಾನವು ಕೆಲವೇ ನಿಮಿಷಗಳಲ್ಲಿ ಸಾವಿರಾರು ಅಡಿಗಳಷ್ಟು ಕೆಳಗೆ ಧುಮುಕಿ ಪತನಗೊಳ್ಳುವ ಹಂತಕ್ಕೆ ತಲುಪಿತ್ತು.
ಇದನ್ನೂ ಓದಿ: ರಿಯಲ್ ಹೀರೋ ಕ್ಯಾಪ್ಟನ್ ಸ್ಮಿತ್!: ಹಾರುವ ವಿಮಾನದಲ್ಲೇ ಪೈಲಟ್ ಜೀವ ರಕ್ಷಿಸಿದ ನಾಯಕನಿಗೆ ಜಗತ್ತಿನಾದ್ಯಂತ ಸಲಾಂ
ತೀವ್ರವಾಗಿ ಗಾಯಗೊಂಡಿದ್ದರೂ ಎದೆಗುಂದದ ಕ್ಯಾಪ್ಟನ್ ಸ್ಮಿತ್, ಸಕಾಲದಲ್ಲಿ ಕಾಕ್‌ಪಿಟ್ ಬಾಗಿಲನ್ನು ತೆರೆದು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದರು. ತಕ್ಷಣವೇ ಒಳನುಗ್ಗಿದ ಪ್ರಯಾಣಿಕರು ದಾಳಿಕೋರ ಸಹ-ಪೈಲಟ್ ಅನ್ನು ಹತೋಟಿಗೆ ತಂದರು. ನಂತರ ವಿಮಾನದಲ್ಲಿದ್ದ ಆಫ್-ಡ್ಯೂಟಿ ಪೈಲಟ್‌ಗಳು ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು. ಕ್ಯಾಪ್ಟನ್ ಸ್ಮಿತ್ ಅವರ ಈ ಸಮಯಪ್ರಜ್ಞೆ ಮತ್ತು ಜೀವಭಯವಿಲ್ಲದ ಸಾಹಸವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೇರಿದಂತೆ ಜಗತ್ತಿನ ಪ್ರಮುಖ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪ್ರಸ್ತುತ ಯುಎಇ ಸರ್ಕಾರಿ ಆಡಳಿತವು ಈ ದಾಳಿಯ ಹಿಂದೆ ಯಾವುದೇ ಉಗ್ರಗಾಮಿ ಸಂಘಟನೆಗಳ ಹಸ್ತವಿದೆಯೇ ಎಂಬ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದು, ಸ್ಮಿತ್ ಅವರ ಆರೋಗ್ಯ ಸ್ಥಿರವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

