ವಿಧಾನಸೌಧದಲ್ಲಿ ‘ಉರ್ದು ಹಬ್ಬ’ ಆಚರಣೆಗೆ ಸರ್ಕಾರದ ನಿರ್ಧಾರ: ವೋಟ್‌ಬ್ಯಾಂಕ್ ರಾಜಕಾರಣ ಎಂದು ಬಿಜೆಪಿ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ನವೆಂಬರ್ 9ರಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅದ್ಧೂರಿಯಾಗಿ ‘ಉರ್ದು ದಿನಾಚರಣೆ’ (ಉರ್ದು ಹಬ್ಬ) ಆಚರಿಸಲು ಮುಂದಾಗಿರುವುದಕ್ಕೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತೀವ್ರ ವಿರೋಧ ವ್ಯಕ್ತಪಡಿಸಿದೆ. ಸರ್ಕಾರದ ಈ ತೀರ್ಮಾನವು ಮುಸ್ಲಿಂ ಸಮುದಾಯದ ವೋಟ್‌ಬ್ಯಾಂಕ್ ಓಲೈಕೆ ರಾಜಕಾರಣವಾಗಿದೆ ಎಂದು ಬಿಜೆಪಿ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.


ಅಲ್ಪಸಂಖ್ಯಾತರ ಕಲ್ಯಾಣ, ಹಜ್, ವಕ್ಫ್ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನವೆಂಬರ್ 9ರಂದು ಶಕ್ತಿಸೌಧದ ಆವರಣದಲ್ಲಿ ಉರ್ದು ಸಾಹಿತ್ಯ, ಸಂಸ್ಕೃತಿ, ಪುಸ್ತಕಗಳು, ಆಹಾರ ಪದ್ಧತಿ ಹಾಗೂ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವ ‘ಉರ್ದು ಹಬ್ಬ’ವನ್ನು ಆಯೋಜಿಸಲಾಗುವುದು ಎಂದು ಪ್ರಕಟಿಸಿದ್ದರು. ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಸರ್ಕಾರದ ನಿಲುವನ್ನು ಮಾಧ್ಯಮ ಪ್ರಕಟಣೆ ಮೂಲಕ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಶಾಸಕ ಎಸ್. ಸುರೇಶ್ ಕುಮಾರ್, ಸರ್ಕಾರದ ಆದ್ಯತೆಗಳನ್ನೇ ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ: ಮಂಗಳೂರಿನ ಎಂಆರ್‌ಪಿಎಲ್ ಬಳಿ ಭೀಕರ ಸ್ಫೋಟ: ಜೋಕಟ್ಟೆಯಲ್ಲಿ ಅದುರಿದ ಮನೆಗಳು, ಉದುರಿದ ಕಿಟಕಿ-ಬಾಗಿಲು

“ಕನ್ನಡದ ನೆಲದಲ್ಲಿ, ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ನಮ್ಮ ತಾಯಿ ಭಾಷೆ ಕನ್ನಡ, ಅದರ ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿಗೆ ಇಂತಹ ಭವ್ಯ ವೇದಿಕೆ ಎಷ್ಟು ಬಾರಿ ಲಭಿಸಿದೆ? ಕನ್ನಡದ ನೂರಾರು ಉಪಭಾಷೆಗಳಿಗೆ ಸಿಗದ ಪ್ರಾಮುಖ್ಯತೆಯನ್ನು ಉರ್ದು ಭಾಷೆಗೆ ಸರ್ಕಾರ ನೀಡುತ್ತಿರುವುದು ಏಕೆ?” ಎಂದು ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.

ಕನ್ನಡಿಗರ ತೆರಿಗೆ ಹಣದಿಂದ ನಡೆಯುವ ಸರ್ಕಾರಿ ವೇದಿಕೆಗಳು ಕೇವಲ ವೋಟ್‌ಬ್ಯಾಂಕ್ ರಾಜಕಾರಣದ ಕೇಂದ್ರಗಳಾಗಬಾರದು. ಕನ್ನಡಿಗರ ಸ್ವಾಭಿಮಾನ ಹಾಗೂ ಅನನ್ಯತೆಯ ಸಂಕೇತವಾಗಿರುವ ವಿಧಾನಸೌಧವನ್ನು ನಿರ್ದಿಷ್ಟ ಸಮುದಾಯವನ್ನು ಓಲೈಸಲು ಬಳಸಿಕೊಳ್ಳುತ್ತಿರುವುದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೂಡಲೇ ಸರ್ಕಾರ ಈ ‘ಉರ್ದು ಹಬ್ಬ’ ಆಚರಣೆಯ ನಿರ್ಧಾರವನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *