ಮಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ಕರಾವಳಿ ಉದ್ದಿಮೆ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಘಟಕದ ಸಮೀಪ ಭೀಕರ ಸ್ಫೋಟವೊಂದು ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಗ್ರಾಮೀಣ ಭಾಗಗಳು ತೀವ್ರವಾಗಿ ನಡುಗಿದ್ದು, ಸ್ಥಳೀಯ ಸಾರ್ವಜನಿಕರಲ್ಲಿ ಭಾರೀ ಆತಂಕ ಹಾಗೂ ಭೀತಿ ಆವರಿಸಿದೆ. ಎಂಆರ್‌ಪಿಎಲ್ ಸಮೀಪ ಸಂಭವಿಸಿದ ಈ ಭಾರೀ ಸ್ಫೋಟದ ತೀವ್ರತೆಯು ಎಷ್ಟು ಭೀಕರವಾಗಿತ್ತೆಂದರೆ, ಜೋಕಟ್ಟೆ ಗ್ರಾಮ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಹಲವು ವಸತಿ ಮನೆಗಳು ತೀವ್ರವಾಗಿ ಅದುರಿವೆ. ಅನೇಕ ಮನೆಗಳ ಕಿಟಕಿ ಮತ್ತು ಬಾಗಿಲುಗಳು ಕಿತ್ತುಬಿದ್ದು ಹಾನಿಗೊಳಗಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸ್ಫೋಟ ಸಂಭವಿಸುತ್ತಿದ್ದಂತೆ ಕೈಗಾರಿಕಾ ಪ್ರದೇಶದಿಂದ ಬೃಹತ್ ಪ್ರಮಾಣದಲ್ಲಿ ಬೆಂಕಿಯ ಜ್ವಾಲೆ ಹಾಗೂ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮಿದ್ದು, ಹಲವು ಕಿಲೋಮೀಟರ್ ದೂರದವರೆಗೂ ಈ ಹೊಗೆ ಕಂಡುಬಂದಿದೆ. ಸ್ಫೋಟದ ಸದ್ದಿಗೆ ಬೆಚ್ಚಿಬಿದ್ದ ಜೋಕಟ್ಟೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಯದಿಂದ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಕಂಪನಿಯ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸ್ಫೋಟಕ್ಕೆ ನಿಖರವಾದ ಕಾರಣವೇನು ಹಾಗೂ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ಕುರಿತು ಹೆಚ್ಚಿನ ಮಾಹಿತಿ ಸಿಗಬೇಕಿದೆ.
ಇದನ್ನೂ ಓದಿ: ಇನ್ಮುಂದೆ ಉಪ್ಪಿನ ಪ್ಯಾಕೆಟ್ ಮೇಲೂ ‘ಸಿಗರೇಟ್ ಮಾದರಿ’ ವಾರ್ನಿಂಗ್ ಲೇಬಲ್
9 ಜನರಿಗೆ ಗಾಯ, ಸ್ಥಳಕ್ಕೆ ಜಿಲ್ಲಾಧಿಕಾರಿ-ಕಮಿಷನರ್ ದೌಡು
ಮಧ್ಯಾಹ್ನ ಸರಿಯಾಗಿ 12:15 ಗಂಟೆಯ ಸುಮಾರಿಗೆ ಘಟಕದಲ್ಲಿ ಈ ಅವಘಡ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಆಕಾಶಕ್ಕೆ ದಟ್ಟ ಹೊಗೆ ಚಿಮ್ಮಿದ್ದು, ಸುತ್ತಮುತ್ತಲಿನ ಗ್ರಾಮೀಣ ಭಾಗಗಳು ತೀವ್ರವಾಗಿ ನಡುಗಿದ್ದವು. ಸ್ಫೋಟ ಸಂಭವಿಸಿದ ತಕ್ಷಣವೇ ಎಂಆರ್‌ಪಿಎಲ್ ಘಟಕದ ಹಾಗೂ ನಗರದ ಅಗ್ನಿಶಾಮಕ ದಳದ ವಾಹನಗಳು ಕಾರ್ಯಾಚರಣೆಗಿಳಿದು, ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿವೆ. ಅವಘಡದಲ್ಲಿ ಗಾಯಗೊಂಡ 9 ಜನರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ನಗರ ಪೋಲಿಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ನರ್ವಡೆ ವಿನಾಯಕ್ ಕಾರ್ಭಾರಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟಕದಲ್ಲಿ ಭದ್ರತಾ ಲೋಪಗಳಿವೆಯೇ ಅಥವಾ ತಾಂತ್ರಿಕ ದೋಷದಿಂದ ಸ್ಫೋಟ ಸಂಭವಿಸಿದೆಯೇ ಎಂಬುದರ ಕುರಿತು ಉನ್ನತ ಮಟ್ಟದ ತನಿಖೆಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

