ನೈಸ್ ವಿವಾದ: ಅಶೋಕ್ ಖೇಣಿ ಅರ್ಜಿಯನ್ನು ವಜಾಗೊಳಿಸಿದ ಸರ್ವೋಚ್ಛ ನ್ಯಾಯಾಲಯ

ಬೆಂಗಳೂರು : ‘ನೈಸ್’ ಯೋಜನೆಯ ಅಕ್ರಮಗಳ ವಿರುದ್ಧ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕಳೆದ ಎರಡು ದಶಕಗಳಿಂದ ನಡೆಸುತ್ತಾ ಬಂದಿದ್ದ ರೈತರ ಪರ ಹೋರಾಟಕ್ಕೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಬಿಗ್ ಜಯ ಸಿಕ್ಕಿದೆ ಎಂದು ಜೆಡಿಎಸ್​​​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ನೈಸ್ ಸಂಸ್ಥೆಯ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ಹಾಗೂ ಫಾರೆನ್ಸಿಕ್ ಆಡಿಟ್‌ಗೆ ಆದೇಶಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಮಧ್ಯಂತರ ತಡೆ ನೀಡುವಂತೆ ಕೋರಿ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಹೈಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿಹಿಡಿದಂತಾಗಿದೆ.

ರೈತರ ಸಾವಿರಾರು ಎಕರೆ ಭೂಮಿ ಕಬಳಿಕೆ & ಅಕ್ರಮ ಟೋಲ್ ಆರೋಪ:

ನೈಸ್ ಯೋಜನೆಗಾಗಿ ರೈತರ ಸಾವಿರಾರು ಎಕರೆ ಫಲವತ್ತಾದ ಜಮೀನನ್ನು ಭೂಸ್ವಾಧೀನ ಮಾಡಿಕೊಂಡು, ಪರಿಹಾರ ನೀಡದೆ, ರಸ್ತೆ ಹೆಸರಿನಲ್ಲಿ ರಾಜಕಾಲುವೆ ಹಾಗೂ ಕೆರೆಗಳನ್ನು ಒತ್ತುವರಿ ಮಾಡಲಾಗಿದೆ ಎಂದು ಜೆಡಿಎಸ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸುತ್ತಲೇ ಬಂದಿದ್ದರು. ಅಲ್ಲದೆ, ನಿಯಮಬಾಹಿರವಾಗಿ ಶತಕೋಟಿ ರೂಪಾಯಿ ಟೋಲ್ ಸಂಗ್ರಹಿಸಲಾಗಿದೆ ಎಂಬ ಪ್ರಮುಖ ಆರೋಪಗಳೂ ಕೇಳಿಬಂದಿದ್ದವು. ಇತ್ತೀಚೆಗೆ ಕರ್ನಾಟಕ ಹೈಕೋರ್ಟ್, “ಯೋಜನೆಯ ಹೆಸರಿನಲ್ಲಿ ಸಾರ್ವಜನಿಕ ಹಿತಾಸಕ್ತಿಗಿಂತ ಖಾಸಗಿ ಹಿತಾಸಕ್ತಿಯೇ ಹೆಚ್ಚಾಗಿ ಈಡೇರಿದೆ” ಎಂದು ತೀವ್ರ ತರಾಟೆಗೆ ತೆಗೆದುಕೊಂಡು, ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿ, ಸಂಸ್ಥೆಯ ಹಣಕಾಸು ವ್ಯವಹಾರಗಳ ಬಗ್ಗೆ ಫಾರೆನ್ಸಿಕ್ ಆಡಿಟ್‌ಗೆ ಆದೇಶ ನೀಡಿತ್ತು. ಈ ತೀರ್ಪನ್ನು ಚಾಲೆಂಜ್ ಮಾಡಿ ಅಶೋಕ್ ಖೇಣಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರೂ, ಅಲ್ಲಿ ಅವರಿಗೆ ಯಾವುದೇ ಸಮಾಧಾನ ಸಿಕ್ಕಿಲ್ಲ.

ಇದನ್ನೂ ಓದಿ: ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಸಚಿವ ಯು.ಟಿ. ಖಾದರ್ ಮಹತ್ವದ ಹೇಳಿಕೆ

ಅಶೋಕ್ ಖೇಣಿ ಅವರ ಮೇಲ್ಮನವಿ ವಜಾಗೊಂಡ ಬೆನ್ನಲ್ಲೇ, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಆಡಳಿತದ ವಿರುದ್ಧ ವಿಪಕ್ಷಗಳು ವಾಗ್ದಾಳಿ ತೀವ್ರಗೊಳಿಸಿವೆ.ಸ್ವತಂತ್ರ ತನಿಖೆಗೆ ಒತ್ತಾಯ: ಅಶೋಕ್ ಖೇಣಿ ಅವರ ಅಕ್ರಮಗಳ ಕುರಿತು ಕುಮಾರಸ್ವಾಮಿ ಮಾಡಿದ ಆರೋಪಗಳು ಸತ್ಯವೆಂದು ಸಾಬೀತಾಗಿದ್ದು, ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ. ‘ನಥಿಂಗ್ ನೈಸ್’ ಹಗರಣ: ನೈಸ್ ಅಕ್ರಮಗಳಿಗೆ ಬೆನ್ನೆಲುಬಾಗಿರುವ ಸರ್ಕಾರ, ಈ “ನಥಿಂಗ್ ನೈಸ್” ಎಂಬ ಬೃಹತ್ ಹಗರಣದ ವಿರುದ್ಧ ಉನ್ನತ ಮಟ್ಟದ ಹಾಗೂ ಸಮಗ್ರ ತನಿಖೆಗೆ ಆದೇಶಿಸಿ ಸಂಕಷ್ಟದಲ್ಲಿರುವ ರೈತರ ಜಮೀನುಗಳನ್ನು ಮರಳಿ ನೀಡಬೇಕು ಎಂದು ಪ್ರತಿಪಕ್ಷಗಳು ಹಾಗೂ ರೈತ ಸಂಘಟನೆಗಳು ಪಟ್ಟು ಹಿಡಿದಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *