ಬೆಂಗಳೂರು: ರಾಜ್ಯದ ಜನತೆಗೆ ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆಯ ಬಿಸಿ ತಟ್ಟಲಿದೆ. ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹8 ರಷ್ಟು ಹೆಚ್ಚಳ ಮಾಡಲು ಮುಖ್ಯಮಂತ್ರಿ ಹಾಗೂ ರಾಜ್ಯ ಸಚಿವ ಸಂಪುಟ (Cabinet) ತಾತ್ವಿಕ ಸಹಮತ ವ್ಯಕ್ತಪಡಿಸಿದೆ. ಆದರೆ, ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ (Model Code of Conduct) ಜಾರಿಯಲ್ಲಿದ್ದು, ದರ ಏರಿಕೆಯ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆಗಳು ನಡೆಯುತ್ತಿರುವುದರಿಂದ ನಂದಿನಿ ಹಾಲಿನ ದರ ಏರಿಕೆ ಕುರಿತು ತಕ್ಷಣವೇ ಅಧಿಕೃತ ಆದೇಶ ಹೊರಡಿಸಲು ತಾಂತ್ರಿಕ ತೊಡಕು ಎದುರಾಗಿದೆ. ಚುನಾವಣಾ ಆಯೋಗದ ಅನುಮತಿ ಕೋರಲು ನಿರ್ಧಾರ: ಹಾಲಿನ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರವು ಚುನಾವಣಾ ಆಯೋಗದ ಅನುಮತಿಯನ್ನು ಕೋರಲಿದೆ. ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಪ್ರಕ್ರಿಯೆಯು ಅಕ್ಟೋಬರ್ 27, 2026 ರಂದು ಪೂರ್ಣಗೊಳ್ಳಲಿದೆ. ಚುನಾವಣಾ ಆಯೋಗದಿಂದ ಮುಂಚಿತವಾಗಿ ಅನುಮತಿ ಸಿಗದಿದ್ದರೆ, ಅಕ್ಟೋಬರ್ 27ರ ನಂತರವೇ ನಂದಿನಿ ಹಾಲಿನ ನೂತನ ದರ ಜಾರಿಗೆ ಬರಲಿದೆ.
ಇದನ್ನೂ ಓದಿ: ವಂದೇ ಮಾತರಂ ಗೀತೆ ಹಾಡುವಾಗ ಸೋನಿಯಾ ಗಾಂಧಿ ಮೈಗೆ ದೆವ್ವ ಬಂದಂತೆ ಆಡಿದ್ದಾರೆ: ಸಂಸದ ಬ್ರಿಜೇಶ್ ಚೌಟ ವಾಗ್ದಾಳಿ
ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಹಾಲಿನ ದರ ಏರಿಕೆ ಮಾಡಬೇಕು ಎಂದು ಹಾಲು ಒಕ್ಕೂಟಗಳು ಹಾಗೂ ರೈತರು ಸರ್ಕಾರಕ್ಕೆ ಸತತವಾಗಿ ಮನವಿ ಮಾಡುತ್ತಿದ್ದರು. ರೈತರ ಹಿತದೃಷ್ಟಿಯಿಂದ ಹಾಲಿನ ದರವನ್ನು ಲೀಟರ್ಗೆ ₹8 ರಷ್ಟು ಹೆಚ್ಚಿಸಲು ಸಂಪುಟ ಸಭೆಯ ಬಹುತೇಕ ಸಚಿವರು ಹಾಗೂ ಮುಖ್ಯಮಂತ್ರಿಗಳು ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆದಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ಸಿಎಂ ಅವರಿಗೆ ನೀಡಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

