ರಾಜ್ಯಾದ್ಯಂತ ಐಸ್‌ಕ್ರೀಮ್ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಸರ್ಜಿಕಲ್ ಸ್ಟ್ರೈಕ್

ಬೆಂಗಳೂರು: ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು.ಟಿ. ಖಾದರ್ ಅವರ ನಿರ್ದೇಶನದಂತೆ, ಕರ್ನಾಟಕ ಸರ್ಕಾರದ ಆಹಾರ ಸುರಕ್ಷತೆ ಮತ್ತು ಜೌಷಧ ಪ್ರಸಾಧನ ಇಲಾಖೆಯು ರಾಜ್ಯಾದ್ಯಂತ ಐಸ್‌ಕ್ರೀಮ್ ತಯಾರಿಕಾ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿ ಭಾರಿ ಕಾರ್ಯಾಚರಣೆ ನಡೆಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅಡಿಯಲ್ಲಿ ನಡೆಸಲಾದ ಈ ವಿಶೇಷ ತಪಾಸಣಾ ಆಂದೋಲನದಲ್ಲಿ ಒಟ್ಟು 45 ಐಸ್‌ಕ್ರೀಮ್ ಉತ್ಪಾದನಾ ಘಟಕಗಳನ್ನು ಪರಿಶೀಲಿಸಲಾಗಿದೆ.

ದಾಳಿಯ ವೇಳೆ ಒಟ್ಟು 70 ಆಹಾರ ಮಾದರಿಗಳನ್ನು (ಐಸ್‌ಕ್ರೀಮ್, ಹಾಲು, ಹಾಲಿನ ಪುಡಿ, ಸಕ್ಕರೆ, ಎಸೆನ್ಸ್ ಹಾಗೂ ಕಚ್ಚಾವಸ್ತುಗಳು) ವಶಕ್ಕೆ ಪಡೆದು, ಗುಣಮಟ್ಟ ಪರೀಕ್ಷೆಗಾಗಿ ಸರ್ಕಾರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ತಪಾಸಣೆ ವೇಳೆ ಹಲವು ಪ್ರಸಿದ್ಧ ಐಸ್‌ಕ್ರೀಮ್ ತಯಾರಿಕಾ ಘಟಕಗಳಲ್ಲಿ ಅವಧಿ ಮುಗಿದ (Expired) ಆಹಾರ ಪದಾರ್ಥಗಳ ಬಳಕೆ, ನೈರ್ಮಲ್ಯದ ಕೊರತೆ ಹಾಗೂ ತಪ್ಪು ಲೇಬಲಿಂಗ್ ನಿಯಮ ಉಲ್ಲಂಘನೆ ಪತ್ತೆಯಾಗಿದೆ

ಬೆಂಗಳೂರಿನ ಜಯನಗರ 3ನೇ ಬ್ಲಾಕ್, ಬಿಬಿಎಂಪಿ ದಕ್ಷಿಣ ವಲಯ ಸವರಾ ಐಸ್‌ಕ್ರೀಮ್ ಕೆಫೆಯಲ್ಲಿ ದಿನಾಂಕ ಮುಗಿದ  ಮಾರಿಗೋಲ್ಡ್ ಬ್ರಿಟಾನಿಯಾ ಬಿಸ್ಕತ್ತುಗಳು, ನಂದಿನಿ ಸಮೃದ್ಧಿ ಹಾಲು, ಅಲ್ಕಲೈಸ್ಡ್ ಟೀ/ಕಾಫಿ ಮಿಕ್ಸ್ ಹಾಗೂ ಒಣ ತೆಂಗಿನಕಾಯಿ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಬೆಂಗಳೂರಿನ ಬಿಕೇನಹಳ್ಳಿ, ಬನ್ನೇರುಘಟ್ಟ ರಸ್ತೆ, ಬಿಬಿಎಂಪಿ ದಕ್ಷಿಣ ವಲಯ ಎಂ.ಎನ್. ಎಂಟರ್‌ಪ್ರೈಸಸ್ ಘಟಕದಲ್ಲೂ ಅವಧಿ ಮುಗಿದ ಪ್ಲೇನ್ ಕ್ಯಾರಮೆಲ್, ನೆಸ್ಲೆ ಮಿಲ್ಕ್‌ಮೇಡ್, ಮಿಲ್ಕಿ ಮಿಸ್ಟ್ ಖೋವಾ ವಶಕ್ಕೆ ಪಡೆಯಲಾಗಿದ್ದು, ಲೇಬಲಿಂಗ್ ನಿಯಮಗಳ ಉಲ್ಲಂಘನೆ ಕಂಡುಬಂದಿದೆ.

ರಾಯಚೂರಿನ ಜೆಮಿನಿ ಐಸ್‌ಕ್ರೀಮ್ ತಯಾರಿಕಾ ಘಟಕದಲ್ಲಿ ತೀವ್ರ ಅಸ್ವಚ್ಛತೆ ಹಾಗೂ ಅನೈರ್ಮಲ್ಯ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಮೈಸೂರಿನ ಜಾನ್ ಕ್ಯಾಂಡಿ ಐಸ್‌ಕ್ರೀಮ್ ತಯಾರಿಕಾ ಘಟಕ ಲೇಬಲಿಂಗ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ₹20,000 ಮೌಲ್ಯದ ಐಸ್‌ಕ್ರೀಮ್ ಉತ್ಪನ್ನಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 

ಇದನ್ನೂ ಓದಿ: ಕರ್ನಾಟಕ ಜಿಪಂ-ತಾಪಂ ಚುನಾವಣೆಗೆ ಮುಹೂರ್ತ ಫಿಕ್ಸ್: 2027ರ ಜನವರಿಯಲ್ಲಿ ಎಲೆಕ್ಷನ್; ಮೀಸಲಾತಿ ಪಟ್ಟಿ ಪ್ರಕಟ

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಹಠಾತ್ ತಪಾಸಣೆಗಳು ರಾಜ್ಯಾದ್ಯಂತ ಮುಂದುವರಿಯಲಿದ್ದು, ಆಹಾರ ಸುರಕ್ಷತಾ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಜೌಷಧ ಪ್ರಸಾಧನ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *