ಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಬಾಕಿಯಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಕಾಲ ಸನ್ನಿಹಿತವಾಗಿದೆ. ಮಂಗಳವಾರ (ಅಕ್ಟೋಬರ್ 06) ಸಿಎಂ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, 2027ರ ಜನವರಿ 15ರೊಳಗೆ ಚುನಾವಣೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಸಂಪುಟ ಸಭೆಯ ನಿರ್ಧಾರದ ಬೆನ್ನಲ್ಲೇ ಚುನಾವಣಾ ಪ್ರಕ್ರಿಯೆ ಚುರುಕುಗೊಂಡಿದ್ದು, ರಾಜ್ಯದ ಒಟ್ಟು 1,129 ಜಿಲ್ಲಾ ಪಂಚಾಯಿತಿ ಹಾಗೂ 3,656 ತಾಲೂಕು ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪಟ್ಟಿಯನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
ಜಿಲ್ಲಾ ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ವಿವರ (ಒಟ್ಟು: 1,129)
ರಾಜ್ಯದಲ್ಲಿ ಒಟ್ಟು 1,129 ಜಿಲ್ಲಾ ಪಂಚಾಯಿತಿ ಸ್ಥಾನಗಳಿದ್ದು, ವರ್ಗವಾರು ಹಾಗೂ ಮಹಿಳಾ ಮೀಸಲಾತಿಯ ವಿವರ ಹೀಗಿದೆ:
ಪರಿಶಿಷ್ಟ ಜಾತಿ (SC): ಒಟ್ಟು 225 ಸ್ಥಾನಗಳು (ಅದರಲ್ಲಿ 121 ಸ್ಥಾನಗಳು ಮಹಿಳೆಯರಿಗೆ)
ಪರಿಶಿಷ್ಟ ಪಂಗಡ (ST): ಒಟ್ಟು 102 ಸ್ಥಾನಗಳು (ಅದರಲ್ಲಿ 59 ಸ್ಥಾನಗಳು ಮಹಿಳೆಯರಿಗೆ)
ಹಿಂದುಳಿದ ವರ್ಗ ‘ಅ’: ಒಟ್ಟು 183 ಸ್ಥಾನಗಳು (ಅದರಲ್ಲಿ 98 ಸ್ಥಾನಗಳು ಮಹಿಳೆಯರಿಗೆ)
ಹಿಂದುಳಿದ ವರ್ಗ ‘ಬ’: ಒಟ್ಟು 43 ಸ್ಥಾನಗಳು (ಅದರಲ್ಲಿ 25 ಸ್ಥಾನಗಳು ಮಹಿಳೆಯರಿಗೆ)
ಸಾಮಾನ್ಯ ವರ್ಗ (General): ಒಟ್ಟು 576 ಸ್ಥಾನಗಳು (ಅದರಲ್ಲಿ 268 ಸ್ಥಾನಗಳು ಮಹಿಳೆಯರಿಗೆ)
ತಾಲೂಕು ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ವಿವರ (ಒಟ್ಟು: 3,656)
ರಾಜ್ಯದ ಒಟ್ಟು 3,656 ತಾಲೂಕು ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಹಂಚಿಕೆಯಾಗಿರುವ ಮೀಸಲಾತಿ:
ಪರಿಶಿಷ್ಟ ಜಾತಿ (SC): 733 ಸ್ಥಾನಗಳು
ಪರಿಶಿಷ್ಟ ಪಂಗಡ (ST): 394 ಸ್ಥಾನಗಳು
ಹಿಂದುಳಿದ ವರ್ಗ ‘ಅ’: 508 ಸ್ಥಾನಗಳು
ಹಿಂದುಳಿದ ವರ್ಗ ‘ಬ’: 111 ಸ್ಥಾನಗಳು
ಸಾಮಾನ್ಯ ವರ್ಗ (General): 1,910 ಸ್ಥಾನಗಳು
ಇವಿಎಂ ಮೆಷಿನ್ ಬದಲು ‘ಬ್ಯಾಲೆಟ್ ಬಾಕ್ಸ್’!: ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ
ಈ ಬಾರಿಯ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಮುಖ ಬದಲಾವಣೆಯೊಂದನ್ನು ತರಲಾಗಿದೆ. ಇವಿಎಂ (EVM) ಯಂತ್ರಗಳ ಬದಲಿಗೆ ಸಾಂಪ್ರದಾಯಿಕ ಮತಪೆಟ್ಟಿಗೆಗಳನ್ನು (ಬ್ಯಾಲೆಟ್ ಬಾಕ್ಸ್) ಬಳಸಲು ಪಂಚಾಯತ್ ರಾಜ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗಿದೆ. ಹೀಗಾಗಿ ಈ ಮುಂಬರುವ ಜಿಪಂ-ತಾಪಂ ಎಲೆಕ್ಷನ್ ಬ್ಯಾಲೆಟ್ ಪೇಪರ್ ಆಧಾರದಲ್ಲೇ ನಡೆಯಲಿದೆ.
ಇದನ್ನೂ ಓದಿ: ಅಕ್ಟೋಬರ್ 1ರಿಂದ ಸಬ್ಸಿಡಿ LPGಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ; ಗ್ರಾಹಕರಿಗೆ ಮಹತ್ವದ ಸೂಚನೆ
ಚುನಾವಣಾ ವೇಳಾಪಟ್ಟಿ ಮತ್ತು ಗ್ರಾಮ ಪಂಚಾಯತಿ ಎಲೆಕ್ಷನ್ ಯೋಜನೆ:
ಡಿಸೆಂಬರ್ 2026: ಚುನಾವಣಾ ಪ್ರಕ್ರಿಯೆ ಆರಂಭ ಹಾಗೂ ಅಧಿಕೃತ ಅಧಿಸೂಚನೆ ಹೊರಡಿಸುವುದು.
ಜನವರಿ 2027 (ಮೊದಲ ವಾರ): ಜಿಪಂ ಹಾಗೂ ತಾಪಂ ಚುನಾವಣಾ ಮತದಾನ ಪೂರ್ಣಗೊಳಿಸುವುದು (ಜನವರಿ 15ರೊಳಗೆ).
ಗ್ರಾಮ ಪಂಚಾಯತಿ ಚುನಾವಣೆ: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಮುಗಿದ ಬೆನ್ನಲ್ಲೇ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ಇನ್ನು ಚುನಾವಣೆಗೆ ಕೇವಲ 3 ತಿಂಗಳು ಮಾತ್ರ ಬಾಕಿ ಉಳಿದಿರುವುದರಿಂದ ಗ್ರಾಮೀಣ ಭಾಗದಲ್ಲಿ ರಾಜಕೀಯ ಕಾವು ಏರಲಾರಂಭಿಸಿದ್ದು, ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಜೋರಾಗಿದೆ.

