ಪ್ರಯಾಗ್ರಾಜ್: ಪೋಕ್ಸೋ (POCSO) ಕಾಯ್ದೆಯಡಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತೆ ಅಥವಾ ದೂರುದಾರರಿಗೆ ಪೂರ್ವಭಾವಿ ನೋಟಿಸ್ ನೀಡದೆ ಹಾಗೂ ಅವರ ವಾದ ಆಲಿಸದೆ ಆರೋಪಿಗೆ ಮುಂಜಾಗ್ರತಾ ಜಾಮೀನು (Anticipatory Bail) ಮಂಜೂರು ಮಾಡುವುದು ನೈಸರ್ಗಿಕ ನ್ಯಾಯದ ತತ್ವಕ್ಕೆ ಸಂಪೂರ್ಣ ವಿರುದ್ಧ. ಇಂತಹ ಆದೇಶಗಳು ‘ಆರಂಭದಲ್ಲೇ ಶೂನ್ಯ’ (Void ab initio) ಹಾಗೂ ಕಟ್ಟುನಿಟ್ಟಿನ ನಿಯಮಗಳ ಉಲ್ಲಂಘನೆಯಾಗಿದ್ದು, ರದ್ದುಗೊಳ್ಳಲು ಅರ್ಹವಾಗಿವೆ ಎಂದು ಅಲಹಾಬಾದ್ ಹೈಕೋರ್ಟ್ ಚಾರಿತ್ರಿಕ ಆದೇಶ ನೀಡಿದೆ.
ಪ್ರಕರಣ ಒಂದರಲ್ಲಿ ವಿಚಾರಣಾ ನ್ಯಾಯಾಲಯವು ಸಂತ್ರಸ್ತೆಗೆ ನೋಟಿಸ್ ನೀಡದೆ ಆರೋಪಿಗಳಿಗೆ ನೀಡಿದ್ದ ಮುಂಜಾಗ್ರತಾ ಜಾಮೀನು ಆದೇಶವನ್ನು ನ್ಯಾಯಮೂರ್ತಿ ವಿವೇಕ್ ಕುಮಾರ್ ಸಿಂಗ್ ಅವರಿದ್ದ ಏಕಸದಸ್ಯ ಪೀಠವು ರದ್ದುಗೊಳಿಸಿ ಈ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಲಯ ಹೇಳಿದ ಪ್ರಮುಖ ಅಂಶಗಳು
ಸಂತ್ರಸ್ತೆಯ ಹಕ್ಕಿನ ಉಲ್ಲಂಘನೆ: “ಪೋಕ್ಸೋ ಕಾಯ್ದೆಯಡಿ ಮುಂಜಾಗ್ರತಾ ಜಾಮೀನು ಅರ್ಜಿಯನ್ನು ಪರಿಶೀಲಿಸುವ ಮುನ್ನ ಸಂತ್ರಸ್ತೆ ಅಥವಾ ದೂರುದಾರರಿಗೆ ನೋಟಿಸ್ ನೀಡುವುದು ಕಡ್ಡಾಯ. ವಿಚಾರಣಾ ನ್ಯಾಯಾಲಯವು ಈ ಶಾಸನಬದ್ಧ ನಿಯಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರಿಂದ ಸಂತ್ರಸ್ತೆಗೆ ತನ್ನ ಸುರಕ್ಷತೆಯ ಆತಂಕ ಹಾಗೂ ಅಪರಾಧದ ಗಂಭೀರತೆಯನ್ನು ಕೋರ್ಟ್ ಮುಂದೆ ಇಡಲು ಅವಕಾಶ ಸಿಗದೆ ಭಾರಿ ಅನ್ಯಾಯವಾಗಿದೆ” ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಆದೇಶ ಸಂಪೂರ್ಣ ರದ್ದು (Void Ab Initio): ಕಡ್ಡಾಯ ಕಾನೂನು ನಿಯಮ ಹಾಗೂ ‘ಆಡಿ ಆಲ್ಟೆರಮ್ ಪಾರ್ಟೆಮ್’ (ಎರಡೂ ಕಡೆಯ ವಾದ ಆಲಿಸಬೇಕು) ಎಂಬ ನೈಸರ್ಗಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿ ನೀಡಲಾದ ಯಾವುದೇ ಜಾಮೀನು ಆದೇಶವು ಆರಂಭದಲ್ಲೇ ಶೂನ್ಯವಾಗಿರುತ್ತದೆ. ಜಾಮೀನು ಸಿಕ್ಕ ನಂತರ ಆರೋಪಿ ಆ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾನೋ ಇಲ್ಲವೋ ಎಂಬುದಕ್ಕಿಂತ ಮಿಗಿಲಾಗಿ, ನಿಯಮ ಉಲ್ಲಂಘನೆಯ ಆಧಾರದ ಮೇಲೆಯೇ ಅದನ್ನು ರದ್ದುಪಡಿಸಬೇಕಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ವಿಮಾನದಲ್ಲೇ ಕಸ್ಟಡಿಗೆ; ಇನ್ಸ್ಟಾಗ್ರಾಮ್ ಲೈವ್ ವೇಳೆ ಕಂಟ್ರೋಲ್ಗೆ ತಗೆದುಕೊಂಡ ಪೊಲೀಸ್
ಪ್ರಕರಣದ ಹಿನ್ನೆಲೆ ಏನು?:
ಫೆಬ್ರವರಿ 06, 2023 ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೂರುದಾರರು (Informant) ಎಫ್ಐಆರ್ ದಾಖಲಿಸಿದ್ದರು. ಪೊಲೀಸರು ಅಂತಿಮ ವರದಿ (B Report) ಸಲ್ಲಿಸಿದ್ದರೂ, ಫೆಬ್ರವರಿ 14, 2025 ರಂದು ವಿಶೇಷ ಪೋಕ್ಸೋ ನ್ಯಾಯಾಲಯವು ದೂರುದಾರರ ವಿರೋಧ ಅರ್ಜಿಯನ್ನು ಪುರಸ್ಕರಿಸಿ ಖಾಸಗಿ ದೂರೆಂದು ಪರಿಗಣಿಸಿತ್ತು. ಬಿಎನ್ಎಸ್ಎಸ್ (BNSS) ನ ಸೆಕ್ಷನ್ 223 ಮತ್ತು 225 ರ ಅಡಿಯಲ್ಲಿ ಸಾಕ್ಷ್ಯಗಳನ್ನು ದಾಖಲಿಸಿದ ನಂತರ, ವಿಶೇಷ ನ್ಯಾಯಾಧೀಶರು ಬಿಎನ್ಎಸ್ (BNS) ಮತ್ತು ಪೋಕ್ಸೋ ಕಾಯ್ದೆಯಡಿ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದ್ದರು. ಆರೋಪಿಗಳು ಮುಂಜಾಗ್ರತಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ವಿಶೇಷ ನ್ಯಾಯಾಲಯವು ಜನವರಿ 17, 2026 ರಂದು ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ದೂರುದಾರರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ದೂರವಾಣಿ ಕರೆ ಸಮರ್ಥನೆ ತಿರಸ್ಕರಿಸಿದ ಹೈಕೋರ್ಟ್:
ವಿಚಾರಣಾ ನ್ಯಾಯಾಧೀಶರಿಂದ ವಿವರಣೆ ಕೇಳಿದ್ದ ಹೈಕೋರ್ಟ್ಗೆ, ಸಂತ್ರಸ್ತೆಗೆ ನೋಟಿಸ್ ನೀಡಲಾಗಿಲ್ಲ ಎಂಬುದನ್ನು ನ್ಯಾಯಾಧೀಶರು ಒಪ್ಪಿಕೊಂಡಿದ್ದರು. ಆದರೆ, ಪೊಲೀಸರು ದೂರುದಾರರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದರು ಎಂದು ಸಮರ್ಥಿಸಿಕೊಳ್ಳಲು ಯತ್ನಿಸಲಾಗಿತ್ತು.
ಆದರೆ ಈ ವಾಟ್ಸಾಪ್/ದೂರವಾಣಿ ನೋಟಿಸ್ನಲ್ಲಿ ಸಹಿ ಇಲ್ಲದಿರುವುದು, ಕರೆ ಸ್ವೀಕರಿಸಿದ್ದು ಯಾರು ಮತ್ತು ಹೇಗೆ ತಲುಪಿಸಲಾಯಿತು ಎಂಬ ವಿವರಗಳಿಲ್ಲದ್ದನ್ನು ಕಂಡು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಪೋಕ್ಸೋ ನಿಯಮಗಳು 2020 (Rule 4(13) to 4(15)) ಹಾಗೂ ಸುಪ್ರೀಂ ಕೋರ್ಟ್ನ ಜಗಜೀತ್ ಸಿಂಗ್ ವರ್ಸಸ್ ಆಶಿಶ್ ಮಿಶ್ರಾ (2022) ಮತ್ತು ಮಹಿಪಾಲ್ ವರ್ಸಸ್ ರಾಜೇಶ್ ಕುಮಾರ್ (2020) ಪ್ರಮುಖ ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಸಂತ್ರಸ್ತೆಗೆ ಪ್ರತಿಯೊಂದು ಹಂತದಲ್ಲೂ ವಾದ ಮಂಡಿಸುವ ಹಕ್ಕಿದೆ ಎಂದು ಸ್ಪಷ್ಟಪಡಿಸಿ ಜಾಮೀನು ರದ್ದುಗೊಳಿಸಿತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

