ಮನೆಮನೆಗೆ ಬಿಲ್ ಕೊಡಲು ಹೋದ ಹೆಸ್ಕಾಂ ಸಿಬ್ಬಂದಿಗೆ ಕಚ್ಚಿದ ನಾಯಿ

ಬಾಗಲಕೋಟೆ : ಬಾಗಲಕೋಟೆ ನಗರದ ವಿದ್ಯಾಗಿರಿ ಪ್ರದೇಶದಲ್ಲಿ ಮನೆಗಳಿಗೆ ವಿದ್ಯುತ್ ಬಿಲ್ ವಿತರಿಸುವ ಕರ್ತವ್ಯದಲ್ಲಿದ್ದ ಹೆಸ್ಕಾಂ (HESCOM) ಮೀಟರ್ ರೀಡರ್ ಮೇಲೆ ಬೀದಿ ನಾಯಿಯೊಂದು ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿರುವ ಆತಂಕಕಾರಿ ಘಟನೆ ವೃತವಾಗಿದೆ. ಬಾಗಲಕೋಟೆಯಲ್ಲಿ ಬೀದಿ ನಾಯಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಹಾಗೂ ವಿವಿಧ ಸೇವೆಗಳ ಸಿಬ್ಬಂದಿ ತೀವ್ರ ಆತಂಕ ಎದುರಿಸುವಂತಾಗಿದೆ.

ವಿದ್ಯಾಗಿರಿ 6ನೇ ಕ್ರಾಸ್‌ನಲ್ಲಿ ಎಂದಿನಂತೆ ಹೆಸ್ಕಾಂ ಸಿಬ್ಬಂದಿ ನಾಗಣ್ಣ ಕೋಗಿಲ್  ಅವರು ಮನೆಮನೆಗೆ ತೆರಳಿ ವಿದ್ಯುತ್ ಬಿಲ್ ವಿತರಿಸುತ್ತಿದ್ದರು. ಈ ವೇಳೆ ಅವರ ಮೇಲೆ ಅನಿರೀಕ್ಷಿತವಾಗಿ ಎರಗಿದ ಬೀದಿ ನಾಯಿ ಕಾಲಿಗೆ ಬಲವಾಗಿ ಕಚ್ಚಿದೆ. ನಾಯಿ ಕಚ್ಚಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು, ಸಿಬ್ಬಂದಿ ನಾಗಣ್ಣ ಅವರು ನೋವಿನಿಂದ ನರಳುವಂತಾಯಿತು.

ಘಟನೆಯನ್ನು ಗಮನಿಸಿದ ತಕ್ಷಣ ಸ್ಥಳೀಯ ನಿವಾಸಿಗಳು ನೆರವಿಗೆ ಧಾವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ನಾಗಣ್ಣ ಅವರನ್ನು ಕೂಡಲೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ  ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.

ವಿದ್ಯಾಗಿರಿ ಮತ್ತು ಸುತ್ತಮುತ್ತಲಿನ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ರಸ್ತೆಗಳಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ಮನೆಮನೆಗೆ ತೆರಳಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ಸಿಬ್ಬಂದಿ ಪ್ರತಿದಿನ ಇಂತಹ ಅಪಾಯಗಳನ್ನು ಎದುರಿಸುವಂತಾಗಿದೆ.

ಇದನ್ನೂ ಓದಿ: 10 ತಿಂಗಳ ಮುದ್ದು ಕಂದಮ್ಮ ದಾರುಣ ಸಾವು: ವೈದ್ಯರು ನೀಡಿದ ಸಿರಪ್ ಸೇವಿಸಿ ಮಗು ಸಾವನ್ನಪ್ಪಿತೇ?

ಬೀದಿ ನಾಯಿಗಳ ದಾಳಿಯಿಂದ ಸಾರ್ವಜನಿಕರ ಸುರಕ್ಷತೆಗೆ ತೀವ್ರ ಧಕ್ಕೆಯುಂಟಾಗುತ್ತಿರುವುದರಿಂದ, ನಗರಸಭೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ನಾಯಿಗಳ ಹಾವಳಿಯನ್ನು ನಿಯಂತ್ರಿಸಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ