ಮೈಸೂರು: ಭೀಕರ ರಸ್ತೆ ಅಪಘಾತ – ಖಾಸಗಿ ಸ್ಲೀಪರ್ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ನಾಲ್ವರು ಸಾವು

ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೀರನಹಳ್ಳಿ ಗೇಟ್ ಬಳಿ ಖಾಸಗಿ ಸ್ಲೀಪರ್ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಈ ಭೀಕರ ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇಂದು (ಅಕ್ಟೋಬರ್ 16) ಮುಂಜಾನೆ ಸುಮಾರು 3:30 ರ ಸುಮಾರಿಗೆ ಈ ಭೀಕರ ದುರ್ಘಟನೆ ಸಂಭವಿಸಿದೆ. ಖಾಸಗಿ ಸ್ಲೀಪರ್ ಬಸ್ ಮೈಸೂರಿನಿಂದ ಮಡಿಕೇರಿಗೆ ಹೊರಟಿತ್ತು. ಅದೇ ವೇಳೆ ಮತ್ತೊಂದು ಕಡೆಯಿಂದ ಅಂದರೆ ಮಡಿಕೇರಿ ಕಡೆಯಿಂದ ಮೈಸೂರು ಕಡೆಗೆ ಲಾರಿ ಬರುತ್ತಿತ್ತು. ಪಿರಿಯಾಪಟ್ಟಣ ತಾಲೂಕಿನ ಕೀರನಹಳ್ಳಿ ಗೇಟ್ ಬಳಿ ಎರಡೂ ವಾಹನಗಳು ಮುಖಾಮುಖಿಯಾಗಿ ಜೋರಾಗಿ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಬಸ್ ಹಾಗೂ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದೆ.

ಇದನ್ನೂ ಓದಿ: ಮೈಸೂರು ದಸರಾ ವೈಭವ ಕಣ್ತುಂಬಿಕೊಳ್ಳಲು KSTDC ಯಿಂದ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್

 ಅಪಘಾತದ ರಭಸಕ್ಕೆ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ರಕ್ಷಿಸಿ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ