ಸಿಎನ್‌ಜಿ ತುಂಬಿದ್ದ ಲಾರಿಗೆ ಕಾರು ಭೀಕರ ಡಿಕ್ಕಿ – ಸ್ಥಳದಲ್ಲೇ ಇಬ್ಬರು ಸಾವು

ದಾವಣಗೆರೆ: ನಗರದ ಬಾಡ ಕ್ರಾಸ್ ಬಳಿ ಸಿಎನ್‌ಜಿ (CNG) ಅನಿಲ ತುಂಬಿದ್ದ ಲಾರಿಗೆ ಕಾರು ಹಿಂಬದಿಯಿಂದ ಭೀಕರವಾಗಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಕಾರು ಚಾಲಕನ ಅಜಾಗರೂಕತೆಯ ಚಾಲನೆಯೇ ಈ ಭೀಕರ ಅಪಘಾತಕ್ಕೆ ಕಾರಣವೆಂದು ಶಂಕಿಸಲಾಗಿದೆ.

ಬೆಂಗಳೂರು ಕಡೆಯಿಂದ ದಾವಣಗೆರೆ ಕಡೆಗೆ ಬರುತ್ತಿದ್ದ ಕಾರು, ದಾವಣಗೆರೆಯ ಬಾಡ ಕ್ರಾಸ್ ಬಳಿ ಅನಿಲ ತುಂಬಿಕೊಂಡು ಚಲಿಸುತ್ತಿದ್ದ ಲಾರಿಗೆ ತೀವ್ರ ರಭಸದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಲಾರಿಯ ಹಿಂಭಾಗದಲ್ಲಿ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನ ಭಾಗಗಳನ್ನು ಕತ್ತರಿಸಿ ಮೃತದೇಹಗಳನ್ನು ಹೊರತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಟ್ಟರು.

ಇದನ್ನೂ ಓದಿ:  ಮೈಸೂರು: ಭೀಕರ ರಸ್ತೆ ಅಪಘಾತ – ಖಾಸಗಿ ಸ್ಲೀಪರ್ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ನಾಲ್ವರು ಸಾವು

ಅಪಘಾತಕ್ಕೀಡಾದ ಕಾರು ‘ಬೃಂದಾವನ ಕನ್ಸ್ಟ್ರಕ್ಷನ್’ (Brindavan Construction) ಹೆಸರಿನಲ್ಲಿ ನೋಂದಣಿಯಾಗಿದೆ (Registrar) ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ದಾವಣಗೆರೆ ಉತ್ತರ ಸಂಚಾರ ಪೊಲೀಸ್ ಠಾಣೆಯ (North Traffic Police) ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ