ಬಂಟ್ವಾಳ: ಯುವಕನಿಗೆ ಚೂರಿ ಇರಿದು ಪರಾರಿಯಾದ ಪುಂಡರು, ಮೂಡಬಿದ್ರೆ ಆಸ್ಪತ್ರೆಗೆ ದಾಖಲು

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪ ಯುವಕನೊಬ್ಬನಿಗೆ ಚೂರಿಯಿಂದ ಇರಿದು ಭೀಕರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ರಾತ್ರಿ ನಡೆದಿದೆ. ಪರಿಚಿತ ಯುವಕರ ತಂಡವೇ ಈ ಕೃತ್ಯ ಎಸಗಿದೆ ಎಂದು ಶಂಕಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದಕಟ್ಟೆ ಸಮೀಪದ ಮಂಚಕಲ್ಲು ಮೇಲುಗುಡ್ಡೆ ನಿವಾಸಿ ಪ್ರಕಾಶ್ ಪೂಜಾರಿ (30) ಚೂರಿ ಇರಿತಕ್ಕೊಳಗಾದ ಯುವಕ.

ರಾತ್ರಿ ವೇಳೆ ಪ್ರಕಾಶ್ ಪೂಜಾರಿ ಅವರ ಮೇಲೆ ಸ್ಥಳೀಯ ಯುವಕರ ತಂಡವೊಂದು ಏಕಾಏಕಿ ಚೂರಿಯಿಂದ ದಾಳಿ ನಡೆಸಿದೆ. ಘಟನೆಯಲ್ಲಿ ಪ್ರಕಾಶ್ ಅವರ ದೇಹದ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಗಾಯಾಳು ಪ್ರಕಾಶ್ ಪೂಜಾರಿ ಅವರನ್ನು ಚಿಕಿತ್ಸೆಗಾಗಿ ಮೂಡಬಿದ್ರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: ರಾಜ್ಯದ ಮತ್ತಷ್ಟು ತಾಲೂಕುಗಳು ಬರಪೀಡಿತ: ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ ಹೊಸದಾಗಿ ಸೇರ್ಪಡೆ, ಬರಪೀಡಿತ ತಾಲೂಕುಗಳ ಸಂಖ್ಯೆ 217ಕ್ಕೆ ಏರಿಕೆ

ಗಾಯಾಳು ಪ್ರಕಾಶ್ ಅವರಿಗೆ ಪರಿಚಯಸ್ಥರಾಗಿದ್ದ ಸ್ಥಳೀಯ ಯುವಕರ ತಂಡವೇ ಈ ಕೃತ್ಯ ಎಸಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ವೈಯಕ್ತಿಕ ದ್ವೇಷ ಅಥವಾ ಹಳೆಯ ವೈಷಮ್ಯ ಈ ದಾಳಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ