ಮುಂಬೈ: ಬಾಲಿವುಡ್ ಯುವ ನಟ ಟೈಗರ್ ಶ್ರಾಫ್ ಅವರ ಕಾರನ್ನು ಗುರಿಯಾಗಿಸಿ ಮುಂಬೈನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣವು ಇಡೀ ಚಲನಚಿತ್ರ ರಂಗವನ್ನು ಬೆಚ್ಚಿಬೀಳಿಸಿದೆ. ಈ ಘಟನೆಯು ನಟ ಸಲ್ಮಾನ್ ಖಾನ್ ವಿರುದ್ಧ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊಂದಿರುವ ದ್ವೇಷದ ವಿಚಾರವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಸಲ್ಮಾನ್ ಖಾನ್ ಜೊತೆ ಒಡನಾಟ ಹೊಂದಿರುವ ಅಥವಾ ಅವರೊಂದಿಗೆ ಕೆಲಸ ಮಾಡುವ ಸೆಲೆಬ್ರಿಟಿಗಳನ್ನು ಗುರಿಯಾಗಿಸಲಾಗುತ್ತಿದೆಯೇ ಎಂಬ ಗಂಭೀರ ಅನುಮಾನಗಳನ್ನು ಈ ಘಟನೆ ಹುಟ್ಟುಹಾಕಿದೆ.
ಸಾಮಾಜಿಕ ಜಾಲತಾಣದಲ್ಲಿ ಹತ್ಯೆಯ ಹೊಣೆ ಹೊತ್ತ ಪೋಸ್ಟ್ ಹಾಗೂ ಆಡಿಯೋ ವೈರಲ್:
ಟೈಗರ್ ಶ್ರಾಫ್ ಕಾರಿನ ಮೇಲಿನ ದಾಳಿಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟ್ ಒಂದರಲ್ಲಿ, ‘ಜೈ ಮಹಾಕಾಲ್… ಜೈ ಶ್ರೀರಾಮ್’ ಎಂದು ಆರಂಭವಾಗಿ, ಈ ಕೃತ್ಯವನ್ನು ತಾವೇ (ಅನಿಲ್ ಪಂಡಿತ್ ಮತ್ತು ಹರ್ಮನ್ ಸಂಧು) ಮಾಡಿದ್ದೇವೆ ಎಂದು ಹೇಳಿಕೊಳ್ಳಲಾಗಿದೆ. “ನಾವು ಕರೆ ಮಾಡಿ ಎಚ್ಚರಿಕೆ ನೀಡಿದ್ದೆವು, ಆದರೆ ಕೇಳಲಿಲ್ಲ. ಮುಂಬೈ ಫಿಲ್ಮ್ ಇಂಡಸ್ಟ್ರಿಯಲ್ಲಿ ಯಾರು ನಮ್ಮ ಮಾತು ಕೇಳುವುದಿಲ್ಲವೋ ಅಥವಾ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಾರೋ, ಮುಂದಿನ ನಂಬರ್ ಅವರದ್ದೇ” ಎಂದು ಬೆದರಿಕೆ ಹಾಕಲಾಗಿದೆ. ಈ ದಾಳಿಯ ಬೆನ್ನಲ್ಲೇ ಬಿಷ್ಣೋಯ್ ಗ್ಯಾಂಗ್ನ ಸಹಚರನೆನ್ನಲಾದ ಅನಿಲ್ ಪಂಡಿತ್ ಹೆಸರಿನಲ್ಲಿ ಮತ್ತೊಂದು ಆಡಿಯೋ ವೈರಲ್ ಆಗಿದ್ದು, ಸಲ್ಮಾನ್ ಖಾನ್ ಕೂಡಲೇ ಬಿಷ್ಣೋಯ್ ಸಮುದಾಯದ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಇಡೀ ಕುಟುಂಬವನ್ನೇ ನಾಶ ಮಾಡುವುದಾಗಿ ಬಹಿರಂಗ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪೋಸ್ಟ್ ಹಾಗೂ ಆಡಿಯೋದ ನೈಜತೆಯನ್ನು ಮುಂಬೈ ಪೊಲೀಸರು ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಆದಾಗ್ಯೂ, ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಿವಾಸದ ಸುತ್ತಲೂ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಪೊಲೀಸರು ಶೂಟರ್ಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ನಟನ ಭೇಟಿಯಾದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ
ಸಲ್ಮಾನ್ ಖಾನ್ ಮತ್ತು ಬಿಷ್ಣೋಯ್ ಗ್ಯಾಂಗ್ ನಡುವಿನ ವೈಷಮ್ಯದ ಹಿನ್ನೆಲೆ ಏನು?:
ಅಕ್ಟೋಬರ್ 1998ರಲ್ಲಿ ರಾಜಸ್ಥಾನದಲ್ಲಿ ‘ಹಮ್ ಸಾತ್-ಸಾತ್ ಹೈ’ ಚಿತ್ರದ ಶೂಟಿಂಗ್ ವೇಳೆ ಕಾಂಕಣಿ ಗ್ರಾಮದ ಬಳಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪ ಸಲ್ಮಾನ್ ಖಾನ್ ಮೇಲಿತ್ತು. ವನ್ಯಜೀವಿಗಳನ್ನು ದೇವರಂತೆ ಪೂಜಿಸುವ ಬಿಷ್ಣೋಯ್ ಸಮುದಾಯಕ್ಕೆ ಇದು ಧಾರ್ಮಿಕವಾಗಿ ಅತ್ಯಂತ ನೋವುಂಟುಮಾಡಿತ್ತು. 2018ರಲ್ಲಿ ಜೋಧ್ಪುರ ನ್ಯಾಯಾಲಯಕ್ಕೆ ಹಾಜಪಡಿಸುವ ವೇಳೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್, “ಸಲ್ಮಾನ್ ಖಾನ್ನನ್ನು ಜೋಧ್ಪುರದಲ್ಲೇ ಕೊಲ್ಲುತ್ತೇವೆ, ಆಗ ನಮ್ಮ ನಿಜವಾದ ಪರಿಚಯ ತಿಳಿಯುತ್ತದೆ” ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದ. 2022ರಲ್ಲಿ ಸಲ್ಮಾನ್ ತಂದೆ ಸಲೀಮ್ ಖಾನ್ ವಾಕಿಂಗ್ ಮಾಡುತ್ತಿದ್ದ ಬಾಂದ್ರಾ ಬ್ಯಾಂಡ್ಸ್ಟ್ಯಾಂಡ್ ಬಳಿ ಬೆದರಿಕೆ ಪತ್ರ ಸಿಕ್ಕಿತ್ತು. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಗತಿ ಸಲ್ಮಾನ್ಗೂ ಕಾದಿದೆ ಎಂದು ಎಚ್ಚರಿಸಲಾಗಿತ್ತು. 2023ರ ಮಾರ್ಚ್ನಲ್ಲಿ ಸಲ್ಮಾನ್ ಮ್ಯಾನೇಜರ್ಗೆ ಬೆದರಿಕೆ ಇಮೇಲ್ ಬಂದಿತ್ತು. ಬೆದರಿಕೆಗಳು ಮುಂದುವರಿದು, 2024ರ ಏಪ್ರಿಲ್ 14ರಂದು ಮುಂಬೈನ ಬಾಂದ್ರಾ ನಿವಾಸದ ಹೊರಗೆ ಇಬ್ಬರು ಬೈಕ್ ಸವಾರರು ಗುಂಡಿನ ದಾಳಿ ನಡೆಸಿದ್ದರು. ಈ ಪ್ರಕರಣದಲ್ಲೂ ಬಿಷ್ಣೋಯ್ ಗ್ಯಾಂಗ್ ನಂಟು ಪತ್ತೆಯಾಗಿತ್ತು. ಸದ್ಯ ಟೈಗರ್ ಶ್ರಾಫ್ ಕಾರಿನ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಮುಂಬೈ ಚಿತ್ರರಂಗದಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ತನಿಖಾ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

