ಬೆಂಗಳೂರು: ರಾಜ್ಯದ ಉನ್ನತ ಶಕ್ತಿ ಕೇಂದ್ರವಾಗಿರುವ ವಿಧಾನಸೌಧವನ್ನು ಸ್ಫೋಟಿಸಿದಂತೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ನಕಲಿ ರೀಲ್ಸ್ (Reel) ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಬಿಹಾರ ಮೂಲದ ಯುವಕನನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಹಜರತ್ ಅಲಿ ಎಂದು ಗುರುತಿಸಲಾಗಿದ್ದು, ಈ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ತೀವ್ರ ಆತಂಕ ಹಾಗೂ ಸಂಚಲನ ಮೂಡಿಸಿದೆ.
ಜೆ.ಸಿ. ರಸ್ತೆಯ ಪೈಪ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಹಜರತ್ ಅಲಿ, ಇತ್ತೀಚೆಗೆ ವಿಧಾನಸೌಧದ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದ. ನಂತರ ಆ ಫೋಟೋಗಳನ್ನು ದುರುಪಯೋಗಪಡಿಸಿಕೊಂಡು, AI ತಂತ್ರಜ್ಞಾನದ ಸಹಾಯದಿಂದ ವಿಧಾನಸೌಧ ಸ್ಫೋಟಗೊಳ್ಳುತ್ತಿರುವಂತಹ ಭೀಕರ ನಕಲಿ ದೃಶ್ಯಗಳನ್ನು ಸೇರಿಸಿ ರೀಲ್ ತಯಾರಿಸಿದ್ದನು.
ಈ ಆಕ್ಷೇಪಾರ್ಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸೈಬರ್ ಪೊಲೀಸರು ಹಾಗೂ ವಿಧಾನಸೌಧ ಪೊಲೀಸ್ ಠಾಣೆಯ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಶಕ್ತಿ ಕೇಂದ್ರದ ಭದ್ರತೆಗೆ ಸವಾಲೆಸೆಯುವ ರೀತಿಯಲ್ಲಿದ್ದ ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ಭೀತಿ ಹುಟ್ಟಿಸಿತ್ತು.
ಘಟನೆಯ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣವೇ ತಾಂತ್ರಿಕ ಸಾಕ್ಷ್ಯಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ, ಹಜರತ್ ಅಲಿಯನ್ನು ಬಂಧಿಸಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಗಂಭೀರ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ಕಾಯ್ದಿರಿಸಲಾಗಿದೆ.
ಇದನ್ನೂ ಓದಿ: ವಿಧಾನಸೌಧದ ಮುಂದೆ ಹೈಡ್ರಾಮಾ: ಮಹಿಳಾ ದಿನದಂದೇ ಯುವತಿಯರ ಬೀದಿ ಕಾಳಗ; ವಿಡಿಯೋ ವೈರಲ್!
ಆತ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಪಡೆಯಲು ಗಂಭೀರತೆ ಅರಿಯದೆ ಈ ಕೆಲಸ ಮಾಡಿದನೇ ಅಥವಾ ಇದರ ಹಿಂದೆ ಯಾವುದಾದರೂ ದುರುದ್ದೇಶ ಹಾಗೂ ಗಂಭೀರ ಸಂಚಿತ್ತೇ ಎಂಬ ಕೋನದಲ್ಲಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯು ಕೃತಕ ಬುದ್ಧಿಮತ್ತೆಯ (AI) ತಂತ್ರಜ್ಞಾನವನ್ನು ಆಜಾಗರೂಕತೆಯಿಂದ ದುರುಪಯೋಗಪಡಿಸಿಕೊಳ್ಳುವುದರಿಂದ ಎದುರಾಗುವ ಕಾನೂನುತ್ಮಕ ಅಪಾಯಗಳು ಮತ್ತು ಭದ್ರತಾ ಸವಾಲುಗಳ ಬಗ್ಗೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

