ಲಂಡನ್: ಪಾಕಿಸ್ತಾನದ ‘ನ್ಯಾಷನಲ್ ಕಮಾಂಡ್ ಅಥಾರಿಟಿ’ (NCA) ಸಲಹೆಗಾರ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಮಝರ್ ಜಮೀಲ್ (Lt General Mazhar Jamil) ಅವರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ವಿರುದ್ಧ ಕಟ್ಟುಕಥೆ ಹಾಗೂ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಜಾಗತಿಕ ಸಮುದಾಯದ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಲಂಡನ್ನ ಪ್ರಸಿದ್ಧ ‘ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್’ (IISS) ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಭಾರತವು ‘ಡೋವಲ್ ಸಿದ್ಧಾಂತ’ವನ್ನು (Doval Doctrine) ಬಳಸಿಕೊಂಡು ಪಾಕಿಸ್ತಾನದಲ್ಲಿ ಅಸ್ಥಿರತೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.
‘ಆಪರೇಷನ್ ಸಿಂಧೂರ್’ ಕುರಿತು ಸುಳ್ಳು ವಾದ:
ಕಳೆದ ವರ್ಷ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ವೇಳೆ ಭಾರತವು ಪರಮಾಣು ಮತ್ತು ಸಾಂಪ್ರದಾಯಿಕ ಯುದ್ಧಸಾಮಗ್ರಿಗಳನ್ನು ಹೊರಬಲ್ಲ ‘ದ್ವಿ-ಸಾಮರ್ಥ್ಯದ’ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸುವ ಮೂಲಕ ದಕ್ಷಿಣ ಏಷ್ಯಾವನ್ನು ಪರಮಾಣು ವಿಪತ್ತಿನ ಅಂಚಿಗೆ ತಳ್ಳಿತ್ತು ಎಂದು ಜಮೀಲ್ ಆರೋಪಿಸಿದ್ದಾರೆ.
ಜಮೀಲ್ ಅವರ ಈ ವಾದ ಸಂಪೂರ್ಣ ಆಧಾರರಹಿತ ಮತ್ತು ಸುಳ್ಳಾಗಿದೆ. ಬ್ರಹ್ಮೋಸ್ ಕ್ಷಿಪಣಿಯು ಕೇವಲ ಸಾಂಪ್ರದಾಯಿಕ ಯುದ್ಧಶಿಖರಗಳನ್ನು ಮಾತ್ರ ಹೊರಬಲ್ಲ ಸಾಮರ್ಥ್ಯ ಹೊಂದಿದ್ದು, ಇದು ಭಾರತದ ‘ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್’ (ಪರಮಾಣು ಪಡೆ) ಭಾಗವಾಗಿಲ್ಲ.
‘ಮೊದಲು ಬಳಸುವುದಿಲ್ಲ’ ನೀತಿಯ ಬಗ್ಗೆ ಗೊಂದಲ:
ಭಾರತದ ‘ನೋ ಫಸ್ಟ್ ಯೂಸ್’ (NFU) ಪರಮಾಣು ನೀತಿಯು ಕೇವಲ ರಾಜತಾಂತ್ರಿಕ ಗಿಮಿಕ್ ಎಂದು ಕರೆದಿರುವ ಜಮೀಲ್, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರ ಪುಸ್ತಕದ ವಾಕ್ಯಗಳನ್ನು ತಮಗೆ ಬೇಕಾದಂತೆ ತಿರುಚಿ ಜಾಗತಿಕ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಭಾರತವು 1999ರಲ್ಲಿ ಬಿಡುಗಡೆ ಮಾಡಿದ ಅಧಿಕೃತ ಪರಮಾಣು ನೀತಿಯ ಪ್ರಕಾರ ‘ನ್ಯೂಕ್ಲಿಯರ್ ಫಸ್ಟ್ ಸ್ಟ್ರೈಕ್’ ಅನ್ನು ಕಟ್ಟುನಿಟ್ಟಾಗಿ ತಡೆದಿದೆ ಮತ್ತು ಅತ್ಯಂತ ಜವಾಬ್ದಾರಿಯುತ ‘ಕನಿಷ್ಠ ನಿರೋಧಕ ಶಕ್ತಿ’ ನೀತಿಯನ್ನು ಅನುಸರಿಸುತ್ತಿದೆ.
ಇದನ್ನೂ ಓದಿ: ಅಮೆರಿಕ-ಪಾಕಿಸ್ತಾನ ಯುದ್ಧ ನಡೆದರೆ ಪಾಕ್ ಪರ ನಿಲ್ಲುತ್ತೇವೆ: ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್ ವಿವಾದಾತ್ಮಕ ಹೇಳಿಕೆ
2022ರ ಆಕಸ್ಮಿಕ ಬ್ರಹ್ಮೋಸ್ ಉಡಾವಣೆ ವಿಚಾರ:
2022ರ ಮಾರ್ಚ್ನಲ್ಲಿ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಪಾಕಿಸ್ತಾನದ ಖಾನೇವಾಲ್ ಜಿಲ್ಲೆಗೆ ಬಿದ್ದ ಬ್ರಹ್ಮೋಸ್ ಕ್ಷಿಪಣಿ ಘಟನೆಯನ್ನು, ಭಾರತವು ಯೋಜಿತವಾಗಿ ನಡೆಸಿದ ದಾಳಿ ಎಂದು ಸುಳ್ಳು ಹರಡಲು ಯತ್ನಿಸಿದ್ದಾರೆ.
ಭಯೋತ್ಪಾದನೆ ಬೆಂಬಲಿಸುವ ಪ್ರಮುಖ ದೇಶದಿಂದಲೇ ಭಾರತದ ಮೇಲೆ ಆರೋಪ!
ತನ್ನ ದೇಶದಲ್ಲೇ ತಾಲಿಬಾನ್ (TTP) ಹಾಗೂ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (BLA) ಉಗ್ರ ಸಂಘಟನೆಗಳ ಹಾವಳಿ ಹೆಚ್ಚಾಗುತ್ತಿರುವುದಕ್ಕೆ ತನ್ನದೇ ವೈಫಲ್ಯಗಳನ್ನು ಮುಚ್ಚಿಹಾಕಲು, ಭಾರತವು ಈ ಗುಂಪುಗಳಿಗೆ ಬೆಂಬಲ ನೀಡುತ್ತಿದೆ ಎಂದು ಜಮೀಲ್ ಗೂಬೆಗೆಡವಿದ್ದಾರೆ. 1971ರ ಮುಕ್ತಿಬಾಹಿನಿ ಹೋರಾಟ ಹಾಗೂ 1980ರ ದಶಕದ ಎಲ್ಟಿಟಿಇ (LTTE) ಉದಾಹರಣೆಗಳನ್ನು ನೀಡಿ ಭಾರತವನ್ನು ‘ಭಯೋತ್ಪಾದನೆಯ ರಫ್ತುದಾರ’ ಎಂದು ಬಿಂಬಿಸಲು ಯತ್ನಿಸಿದ್ದಾರೆ.
ಇಷ್ಟೇ ಅಲ್ಲದೆ, ಸ್ವೀಡನ್ನ ‘ಸಿಪ್ರಿ’ (SIPRI) ಸಂಸ್ಥೆಯ ವರದಿಗಳನ್ನು ಉಲ್ಲೇಖಿಸಿ, ಭಾರತವು ಜಲಮಾರ್ಗ ಆಧಾರಿತ ಪರಮಾಣು ಸಲಾಮತಿ ಕ್ಷಿಪಣಿಗಳನ್ನು ಕಾರ್ಯಾಚರಣೆಗೆ ಇಳಿಸುವ ಮೂಲಕ ಪರಮಾಣು ದಾಳಿಯ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ಬೊಬ್ಬೆ ಹೊಡೆದಿದ್ದಾರೆ. ಭಾರತಕ್ಕೆ ನೀಡಿರುವ NPT ವಿನಾಯಿತಿಯನ್ನು ರದ್ದುಗೊಳಿಸಬೇಕೆಂಬ ದುರುದ್ದೇಶವೇ ಪಾಕಿಸ್ತಾನದ ಈ ಆಟದ ಹಿಂದಿದೆ ಎಂಬುದು ಸ್ಪಷ್ಟವಾಗಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

