ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಸತತ 5 ಬಾರಿ ಗೆದ್ದು ಬೀಗಿದ್ದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರಿಗೆ ಮುಖಭಂಗವಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ (NDA) ಅಭ್ಯರ್ಥಿ ಎ.ಪಿ. ರಂಗನಾಥ್ 908 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಚುನಾವಣಾ ಫಲಿತಾಂಶದ ವಿವರಗಳು:
ಒಟ್ಟು ಚಲಾವಣೆಯಾದ ಮತಗಳು: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 27,405 ಮತದಾರರಿದ್ದು, ಈ ಪೈಕಿ 22,468 ಮತಗಳು ಚಲಾವಣೆಯಾಗಿದ್ದವು.
ಸಿಂಧು & ಅಸಿಂಧು ಮತಗಳು: ಚಲಾವಣೆಯಾದ ಮತಗಳಲ್ಲಿ 20,611 ಮತಗಳು ಸಿಂಧುವಾಗಿದ್ದರೆ, ಬರೋಬ್ಬರಿ 1,857 ಮತಗಳು ಅಸಿಂಧುವಾಗಿವೆ.
ಎನ್ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್: 10,810 ಮತಗಳು
ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ: 9,902 ಮತಗಳು
ಗೆಲುವಿನ ಅಂತರ: ಎನ್ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ 908 ಮತಗಳ ಅಂತರದಿಂದ ಪ್ರಚಂಡ ವಿಜಯ ದಾಖಲಿಸಿದ್ದಾರೆ.
ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್: “ರಾಜಕೀಯ ಕೊಲೆಗಾರರು ತಪ್ಪಿಸಿಕೊಳ್ಳಬಾರದು!”; ಸುಪ್ರೀಂ ಕೋರ್ಟ್
ಬಿಜೆಪಿ – ಜೆಡಿಎಸ್ ಮೈತ್ರಿಕೂಟದಲ್ಲಿ ಸಂಭ್ರಮ:
ಜೆಡಿಎಸ್ ಅಭಿನಂದನೆ:
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಎ.ಪಿ. ರಂಗನಾಥ್ ಅವರಿಗೆ ಜೆಡಿಎಸ್ ಅಭಿನಂದನೆ ಸಲ್ಲಿಸಿದೆ. “ನಮ್ಮ ಅಭ್ಯರ್ಥಿಯ ಮೇಲೆ ವಿಶ್ವಾಸವಿಟ್ಟು, ಶಿಕ್ಷಕರ ಹಿತರಕ್ಷಣೆ ಮತ್ತು ಶಿಕ್ಷಣ ಕ್ಷೇತ್ರದ ಏಳಿಗೆಗಾಗಿ ಮತ ನೀಡಿದ ಸಮಸ್ತ ಶಿಕ್ಷಕ ಬಂಧುಗಳಿಗೆ ಹಾಗೂ ಒಗ್ಗಟ್ಟಿನಿಂದ ಶ್ರಮಿಸಿದ ಬಿಜೆಪಿ-ಜೆಡಿಎಸ್ ನಾಯಕರು, ಕಾರ್ಯಕರ್ತರಿಗೆ ಧನ್ಯವಾದಗಳು” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಶಾಸಕ ಎಸ್. ಸುರೇಶ್ ಕುಮಾರ್ ಹರ್ಷ:
“ಇದು ಶಿಕ್ಷಕರ ಒಗ್ಗಟ್ಟಿಗೆ ಸಿಕ್ಕ ಜಯ, ವಿಶ್ವಾಸಕ್ಕೆ ವಿಜಯ. ಶಿಕ್ಷಕರ ಧ್ವನಿಯಾಗಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿ ರಂಗನಾಥ್ ಅವರ ಕಾರ್ಯ ಯಶಸ್ವಿಯಾಗಲಿ” ಎಂದು ಬಿಜೆಪಿ ಹಿರಿಯ ನಾಯಕ, ಶಾಸಕ ಎಸ್. ಸುರೇಶ್ ಕುಮಾರ್ ಶುಭಹಾರೈಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

