ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಕೀಯ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಹೊಸ ವಿಶೇಷ ತನಿಖಾ ತಂಡ (SIT) ರಚನೆ ವಿಳಂಬದ ಕುರಿತು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಎಸ್‌ಐಟಿ ರಚಿಸಿ, ಅದಕ್ಕೊಂದು ಸಕ್ಷಮ ಪೊಲೀಸ್ ಠಾಣೆಯನ್ನು ರೂಪಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ನಡವಳಿಕೆಗೆ ಹೈಕೋರ್ಟ್ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪ್ರಕರಣದ ವಿಚಾರಣೆ ವೇಳೆ ಸರ್ಕಾರದ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿತು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೊಕೇಟ್ ಜನರಲ್ (AG) ಶಶಿಕಿರಣ್ ಶೆಟ್ಟಿ ಅವರು, “ಶೀಘ್ರದಲ್ಲೇ ನೂತನ ಎಸ್‌ಐಟಿ ತಂಡವನ್ನು ರಚಿಸಲಾಗುವುದು” ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು. ಇದೇ ವೇಳೆ, ಹೊಸ ತನಿಖಾ ತಂಡಕ್ಕಾಗಿ ಆಯ್ಕೆ ಮಾಡಲಾಗಿರುವ ಕೆಲವು ಪೊಲೀಸ್ ಅಧಿಕಾರಿಗಳ ಹೆಸರುಗಳ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ (Sealed Cover) ನ್ಯಾಯಮೂರ್ತಿಗಳಿಗೆ ಸಲ್ಲಿಸಲಾಯಿತು.
ಇದನ್ನೂ ಓದಿ: ಆಂಜನೇಯನ ಭಕ್ತರಿಗೆ ಸಿಹಿ ಸುದ್ದಿ: ಅಂಜನಾದ್ರಿ ಬೆಟ್ಟ ದೇಗುಲ ಕೇಸ್‌ನಲ್ಲಿ ಹೈಕೋರ್ಟ್ ಮಹತ್ವದ ಆದೇಶ
ಹೈಕೋರ್ಟ್ ಪ್ರಮುಖ ಸೂಚನೆಗಳು:
ಆಕ್ಷೇಪಣೆಗೆ ಅವಕಾಶ: ಸರ್ಕಾರ ಸಲ್ಲಿಸಿರುವ ಹೊಸ ಅಧಿಕಾರಿಗಳ ಹೆಸರುಗಳ ಕುರಿತು ಅರ್ಜಿದಾರರ ಪರ ವಕೀಲರಿಗೆ ಪರಿಶೀಲಿಸಲು ಸೂಚಿಸಿದ ಹೈಕೋರ್ಟ್, ಯಾವುದೇ ಆಕ್ಷೇಪಣೆಗಳಿದ್ದರೆ ತಿಳಿಸುವಂತೆ ನಿರ್ದೇಶನ ನೀಡಿತು.
ವಿಚಾರಣೆ ಮುಂದೂಡಿಕೆ: ಈ ಮಹತ್ವದ ಅರ್ಜಿಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಹೈಕೋರ್ಟ್ ಮುಂದೂಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

